ರಾಂಚಿ (ಜಾರ್ಖಂಡ್): ಜಾರ್ಖಂಡ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವಿಕಾಸ್ ಚಂದ್ರ ಶ್ರೀವಾಸ್ತವ ತಮ್ಮ ಸರ್ಕಾರಿ ಕೆಲಸದೊಂದಿಗೆ ಗ್ರಾಮೀಣ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೀರೆರೆಯುತ್ತಿದ್ದಾರೆ. ಡಿಎಸ್‌ಪಿ ವಿಕಾಸ್ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ.
ಹಜಾರಿಬಾಗ್ ಜಿಲ್ಲೆಯ ನಿವಾಸಿಯಾಗಿರುವ ವಿಕಾಸ್ ಚಂದ್ರ ಶ್ರೀವಾಸ್ತವ ಅವರು 2013ರಲ್ಲಿ ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣಯಾಗಿದ್ದಾರೆ. ಇದಕ್ಕೂ ಮೊದಲಿನಿಂದಲೂ ಹಿಂದುಳಿದ ಮಕ್ಕಳಿಗೆ ಕಲಿಸುತ್ತಿದ್ದಾರೆ. ಅಲ್ಲದೇ, ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು 'ಡಿಎಸ್‌ಪಿ ಕಿ ಪಾಠಶಾಲಾ' ಎಂಬ ಹೆಸರಲ್ಲೇ ಉಚಿತ ಯೂಟ್ಯೂಬ್ ಚಾನಲ್ ಸಹ ಪ್ರಾರಂಭಿಸಿದ್ದಾರೆ. ಇದರಿಂದ ಅಧಿಕ ವಿದ್ಯಾರ್ಥಿಗಳು ಇದರ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ.
ವಿಕಾಸ್ ಚಂದ್ರ ಇಲ್ಲಿನ ಗುರು ಗೋಬಿಂದ್ ಸಿಂಗ್ ರಸ್ತೆಯಲ್ಲಿರುವ ಎಲಿಗೆಂಟ್ ಕೋಚಿಂಗ್ ಸೆಂಟರ್‌ನಲ್ಲಿ ತಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಈ ಸಂಸ್ಥೆಯು 2001ರಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧಿಸುತ್ತಿದೆ. ತಾವು ತಯಾರಿ ನಡೆಸುವಾಗಲೂ ಅವರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಡಿಎಸ್‌ಪಿ ಆಗಿ ನೇಮಕಗೊಂಡ ನಂತರವೂ ವಿಕಾಸ್ ತಮ್ಮ ಬೋಧನೆ ನಿಲ್ಲಿಸಿಲ್ಲ.