ರಾಯಪುರ/ರಾಂಚಿ: ಪ್ರತಿಪಕ್ಷದ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ಭೀತಿಯಿಂದ ಛತ್ತೀಸ್‌ಗಢದ ರಾಯಪುರದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಜಾರ್ಖಂಡ್ನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಇಂದು ವಿಮಾನದಲ್ಲಿ ರಾಜಧಾನಿ ರಾಂಚಿಗೆ ಮರಳಿದ್ದಾರೆ. ಇತ್ತ, ಮುಖ್ಯಮಂತ್ರಿ ಹೇಮಂತ್ ಸೋರೆನ್ ತಮ್ಮ ಸರ್ಕಾರದ ಅಸ್ಥಿತ್ವವನ್ನು ಖಾತ್ರಿ ಪಡಿಸಲು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚಿಸಲಿದ್ದಾರೆ.
ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆತಂತಕದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ತನ್ನ ಶಾಸಕರನ್ನು ರಾಜ್ಯದಿಂದ ಸ್ಥಳಾಂತರ ಮಾಡಿತ್ತು. ತನ್ನ ಎಲ್ಲ ಶಾಸಕರನ್ನು ರಾಯಪುರ ಸಮೀಪದ ಐಷಾರಾಮಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 30ರಿಂದಲೂ ರೆಸಾರ್ಟ್‌ನಲ್ಲಿ ಶಾಸಕರು ಬೀಡು ಬಿಟ್ಟಿದ್ದರು.