ರಾಂಚಿ (ಜಾರ್ಖಂಡ್):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಮೋದಿ ಮತ್ತು ಅಮಿತ್ ಶಾ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯಗಳಲ್ಲಿ ರಾಹುಲ್ ವಿರುದ್ಧ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಏಪ್ರಿಲ್ನಲ್ಲಿ ಇವುಗಳ ವಿಚಾರಣೆಗೆ ಬರಲಿವೆ. ಇದರಲ್ಲಿ ಒಂದು ಪ್ರಕರಣ ವಿಚಾರಣೆಯು ಏಪ್ರಿಲ್ 1ರಂದು ನಡೆಯಲಿದೆ.
ಇದನ್ನೂ ಓದಿ:ಮೋದಿ ಉಪನಾಮ ಪ್ರಕರಣ: ಏ.12 ರಂದು ಪಾಟ್ನಾ ಕೋರ್ಟ್ಗೆ ಹಾಜರಾಗಲಿರುವ ರಾಹುಲ್ ಗಾಂಧಿ
ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ಕುರಿತಾಗಿ ರಾಹುಲ್ ಗಾಂಧಿ ವಿರುದ್ಧ ಪ್ರದೀಪ್ ಮೋದಿ ಎಂಬುವವರು ಮಾನನಷ್ಟ ಮೊಕದ್ದಮೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯು ರಾಂಚಿಯ ಕೆಳ ನ್ಯಾಯಾಲಯದಲ್ಲಿ ಏಪ್ರಿಲ್ 1ರಂದು ನಡೆಯಲಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಜನವರಿ 17ರಂದು ರಾಹುಲ್ ಗಾಂಧಿ ಸಮನ್ಸ್ ಜಾರಿ ಮಾಡಲಾಗಿತ್ತು. ಇದಾದ ನಂತರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್‌ನಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದಲ್ಲಿ ಈ ವಿಚಾರಣೆ ಆರಂಭವಾಗಿದೆ.
ಅಮಿತ್ ಶಾ ಕುರಿತ ಹೇಳಿಕೆ ಸಂಬಂಧ ಎರಡು ಅರ್ಜಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಎರಡು ಪ್ರತ್ಯೇಕ ಅರ್ಜಿಗಳು ಸಹ ದಾಖಲಿಸಲಾಗಿದೆ. ರಾಂಚಿ ಎಂಪಿ-ಎಂಎಲ್ಎ ನ್ಯಾಯಾಲಯದಲ್ಲಿ ನವೀನ್ ಝಾ ಮತ್ತು ಚೈಬಾಸಾ ನ್ಯಾಯಾಲಯದಲ್ಲಿ ಪ್ರದೀಪ್ ಕುಮಾರ್ ಎಂಬುವವರು ಈ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳ ವಿಚಾರಣೆ ಕೂಡ ಏಪ್ರಿಲ್ ಮೊದಲ ವಾರದಲ್ಲಿ ನ್ಯಾಯಾಲಯಗಳಲ್ಲಿ ನಡೆಯಲಿದೆ.