ರಾಂಚಿ(ಜಾರ್ಖಂಡ್):ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಜಾರ್ಖಂಡ್ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮೃತಪಟ್ಟು, 24 ಜನರು ಗಾಯಗೊಂಡು ತೀವ್ರ ತಲ್ಲಣ ಮೂಡಿಸಿದೆ. ಹೀಗಾಗಿ ಜಾರ್ಖಂಡ್ನ ರಾಂಚಿ ಮತ್ತು ರಾಮಗಢ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, ಈ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶನಿವಾರ ಆದೇಶಿಸಿದ್ದಾರೆ.
ಪ್ರವಾದಿ ಮುಹಮದ್ರ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿಯ ಉಚ್ಚಾಟಿತ ಮುಖಂಡೆ ನೂಪುರ್ ಶರ್ಮಾ ವಿರುದ್ಧ ರಾಂಚಿ ಮತ್ತು ರಾಮಗಢದಲ್ಲಿ ನಡೆದ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿ, ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಪೊಲೀಸರಿಗೂ ಗಾಯಗಳಾಗಿವೆ. ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಹೀಗಾಗಿ ರಾಜಧಾನಿ ರಾಂಚಿ ಮತ್ತು ರಾಮಗಢ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರಿಂದ ಸೂಕ್ಷ್ಮ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜನರು ಸಂಯಮದಿಂದ ವರ್ತಿಸುವಂತೆ ಪೊಲೀಸರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.
ಎಲ್ಲಾ ಅಂಗಡಿಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ. ರಸ್ತೆಗಳಲ್ಲಿ ಯಾವುದೇ ರೀತಿಯ ಸಂಚಾರ ನಡೆಯುತ್ತಿಲ್ಲ. ಪಲಾಮು, ಗರ್ಹ್ವಾ ಮತ್ತು ಲತೇಹರ್ ಪ್ರದೇಶಗಳಲ್ಲೂ ಸಹ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.