ರಾಂಚಿ(ಜಾರ್ಖಂಡ್): ಅಕ್ರಮ ಗಣಿಗಾರಿಕೆ ಗುತ್ತಿಗೆ ವಿವಾದದ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಇಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತಯಾಚಿಸಿದ್ದು, ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸದನದಿಂದ ಹೊರನಡೆದಿದೆ. ಸೊರೆನ್ ಪರವಾಗಿ 48 ಶಾಸಕರು ಮತ ಚಲಾವಣೆ ಮಾಡಿದ್ದಾರೆ.
ಪ್ರತಿಪಕ್ಷ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ಭೀತಿಯಿಂದ ಛತ್ತೀಸ್‌ಗಢದ ರಾಯಪುರದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಜಾರ್ಖಂಡ್ನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ವಿಶೇಷ ವಿಮಾನದ ಮೂಲಕ ನಿನ್ನೆ ರಾಜಧಾನಿ ರಾಂಚಿಗೆ ಮರಳಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಸರ್ಕಾರದ ಅಸ್ಥಿತ್ವವನ್ನು ಖಾತ್ರಿಪಡಿಸಲು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿದ್ದರು.
ಹೇಮಂತ್ ಸೊರೆನ್ ಅವರನ್ನು ಶಾಸಕರಾಗಿ ಅನರ್ಹಗೊಳಿಸುವ ಸಾಧ್ಯತೆಯ ಕಾರಣ ಸುಮಾರು 30 ಶಾಸಕರು ಮತ್ತು ಯುಪಿಎ ಸರ್ಕಾರದ ಸಚಿವರು ವಿಶ್ವಾಸಮತಕ್ಕೆ ಹಾಜರಾಗಿದ್ದರು. ನಿನ್ನೆ ಸರ್ಕಿಟ್ ಹೌಸ್‌ನಲ್ಲಿ ಶಾಸಕರೊಂದಿಗೆ ಸೊರೇನ್ ಮಹತ್ವದ ಸಭೆ ನಡೆಸಿದ್ದರು. ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯ ಮಾಡಿತ್ತು.