ಝಾನ್ಸಿ(ಉತ್ತರ ಪ್ರದೇಶ): ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಭರತ್ ಬಹದ್ದೂರ್ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇದಾದ ಕೆಲ ದಿನಗಳಲ್ಲಿ ಈತನ ಹೆಂಡತಿ ಸಹ ಸಾವಿನ ಕದ ತಟ್ಟಿದ್ದಾಳೆ. ಹೀಗಾಗಿ, ಮೂವರು ಮಕ್ಕಳು ಅನಾಥವಾಗಿವೆ. ಆರು ವರ್ಷವಾದರೂ ವಿದ್ಯುತ್ ಇಲಾಖೆ ತಂದೆಯ ಸಾವಿಗೆ ಪರಿಹಾರ ನೀಡದ ಕಾರಣ, ಆರ್ಥಿಕ ಮುಗ್ಗಟ್ಟಿನಿಂದಾಗಿ 19 ವರ್ಷದ ಅನಾಥನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯಕ್ಕೆ ಅನಾಥ ಯುವಕನೋರ್ವ ಬಲಿಯಾಗಿದ್ದಾನೆ. ಮತನನ್ನು ಶನಿ(19) ಎಂದು ಗುರುತಿಸಲಾಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭರತ್, ವಿದ್ಯುತ್ ಅವಘಡದಿಂದ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಆರ್ಥಿಕ ಸಹಾಯ ಹಾಗೂ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ, ಸುಮಾರು ಆರು ವರ್ಷವಾದ್ರೂ ಯಾವುದೇ ರೀತಿಯ ಸಹಾಯ ಬಂದಿಲ್ಲ. ಹೀಗಾಗಿ, ಬೇರೆ ಹಾದಿ ಇಲ್ಲದ ಕಾರಣ ಶನಿ ಈ ನಿರ್ಧಾರ ಕೈಗೊಂಡಿದ್ದಾನೆ.