ಡೆಹ್ರಾಡೂನ್ (ಉತ್ತರಾಖಂಡ): ಹಾಡಹಗಲೇ ಚಿನ್ನಾಭರಣ ಮಳಿಗೆಗೆ ನುಗ್ಗಿದ ಖದೀಮರು ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ರಾಜ್ಯ ಸಂಸ್ಥಾಪನಾ ದಿನಾಚರಣೆ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ಹಿನ್ನೆಲೆ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಖದೀಮರು ಖ್ಯಾತ ಚಿನ್ನಾಭರಣ ಅಂಗಡಿಗೆ ನುಗ್ಗಿ ಚಿನ್ನಾಭರಣಗಳನ್ನು ಎಗರಿಸಿದ್ದಾರೆ.
ಮೂಲಗಳ ಪ್ರಕಾರ, ನಾಲ್ವರು ದುಷ್ಕರ್ಮಿಗಳು ಗ್ರಾಹಕರಂತೆ ನಟಿಸಿ ಆಭರಣ ಮಳಿಗೆಗೆ ಪ್ರವೇಶಿಸಿದ್ದಾರೆ. ನಂತರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಬೆದರಿಸಿ, ಬೆಲೆಬಾಳುವ ಆಭರಣಗಳನ್ನು ದೋಚಿ ಅಂಗಡಿಯಿಂದ ಪರಾರಿಯಾಗಿದ್ದಾರೆ. ಡೆಹ್ರಾಡೂನ್ನ ರಾಯ್ಪುರ ರಸ್ತೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆ ಸುಮಾರು ಈ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಆಭರಣ ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರತ್ಯೇಕ ಪ್ರಕರಣ:ಇತ್ತೀಚೆಗೆ ನವದೆಹಲಿಯ ಅಂಗಡಿಯೊಂದರಲ್ಲಿ 25 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿತರಿಂದ ಸುಮಾರು 18.5 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಲೋಕೇಶ್ ಶ್ರೀವಾಸ್ ಮತ್ತು ಶಿವ ಚಂದ್ರವಂಶಿ ಬಂಧಿತ ಆರೋಪಿಗಳು.
ದೆಹಲಿ ಪೊಲೀಸರು ಬಿಲಾಸ್ಪುರದಲ್ಲಿ ಶಂಕಿತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆತನ ಮಾಹಿತಿ ಆಧರಿಸಿ, ಕವರ್ಧಾದಲ್ಲಿ ಅಡಗಿಕೊಂಡಿದ್ದ ಆರೋಪಿ ಶಿವ ಚಂದ್ರವಂಶಿ ಮೇಲೆ ದಾಳಿ ನಡೆಸಿದ್ದರು. ಶಿವ ಚಂದ್ರವಂಶಿಯಿಂದ ಪೊಲೀಸರು 23 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದ್ದರು. ವಿಷಯ ತಿಳಿದ ಪ್ರಮುಖ ಆರೋಪಿ ಲೋಕೇಶ್ ಪರಾರಿಯಾಗಿದ್ದ. ಆದರೆ, ಕಳ್ಳನ ಬೇಟೆ ಬಿಡದ ಪೊಲೀಸರು ಆತನನ್ನು ಸ್ಮೃತಿ ನಗರದಲ್ಲಿ ಬಂಧಿಸಿದ್ದರು.