ಕುಪ್ವಾರ(ಜಮ್ಮು ಕಾಶ್ಮೀರ):ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಹಂದ್ವಾರ ಪ್ರದೇಶದಲ್ಲಿ ಉಗ್ರನನ್ನು ಬಂಧಿಸಲಾಗಿದ್ದು, ಆತನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ 21 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ 92ನೇ ಬೆಟಾಲಿಯನ್ ಭಾಗವಹಿಸಿದ್ದವು.
ರಾಜ್ವಾರ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಸಿಕ್ಕ ನಿಖರ ಮಾಹಿತಿಯ ಮೇರೆಗೆ ಸುಲ್ತಾನ್‌ಪೋರಾ ಸೇತುವೆಯ ಬಳಿ ತೀವ್ರ ಶೋಧ ನಡೆಸುತ್ತಿದ್ದರು. ವಾಹನ ತಪಾಸಣೆ ವೇಳೆ ಓರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ಹಿಡಿದ ಭದ್ರತಾ ಪಡೆಗಳು ವಿಚಾರಣೆ ನಡೆಸಿದಾಗ ಆತ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕ ಎಂದು ತಿಳಿದುಬಂದಿದೆ. ಆತನಿಂದ ಒಂದು ಪಿಸ್ತೂಲ್ ಮತ್ತು ಮ್ಯಾಗಜೀನ್ ಮತ್ತು ಐದು ಪಿಸ್ತೂಲ್ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಚಮೋಲಿ ದುರಂತ: ಒಂದು ವರ್ಷದ ನಂತರ ಮೃತದೇಹ ಪತ್ತೆ
ಹಂದ್ವಾರ ಪ್ರದೇಶದಲ್ಲಿ ದಾಳಿ ನಡೆಸಲು ಬಂದಿದ್ದಾಗಿ ಭಯೋತ್ಪಾದಕ ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಗಡಿಯುದ್ದಕ್ಕೂ ಪಾಕಿಸ್ತಾನದ ಹ್ಯಾಂಡ್ಲರ್ಗಳಿದ್ದು, ಅವರ ನಿರ್ದೇಶನದ ಮೇಲೆ ಕೆಲಸ ಮಾಡುತ್ತಿದ್ದೆ ಎಂಬುದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.