ಕಾಶ್ಮೀರ, ಜಮ್ಮು ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೋಯ್ಬಾ ಮತ್ತು ಜೈಷ್-ಎ-ಮೊಹಮದ್ನೊಂದಿಗೆ ಸಂಬಂಧ ಹೊಂದಿದ್ದ ಐವರು ಭಯೋತ್ಪಾದಕರನ್ನು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಹೊಡೆದುರುಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಬದ್ಗಾಮ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಪ್ರತ್ಯೇಕವಾಗಿ ಎನ್ಕೌಂಟರ್ ನಡೆಸಿದ್ದು, ಜೈಶ್-ಎ-ಮೊಹಮ್ಮದ್ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.
12 ಗಂಟೆಗಳ ಕಾರ್ಯಾಚರಣೆಯಲ್ಲಿ ಪುಲ್ವಾಮಾ ಜಿಲ್ಲೆಯ ನೈರಾ ಪ್ರದೇಶದಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಬದ್ಗಾಮ್‌ನ ಚ್ರಾರ್-ಇ-ಶರೀಫ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇದು ಭದ್ರತಾಪಡೆಗಳಿಗೆ ಸಿಕ್ಕ ಬಹುದೊಡ್ಡ ಯಶಸ್ಸು ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.