ವಯನಾಡು (ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಲ್ಲಿನ ತಲಪ್ಪುಳ ಸಮೀಪ ಜೀಪ್ವೊಂದು ರಸ್ತೆ ಪಕ್ಕದ ಕಮರಿಗೆ ಬಿದ್ದು ದುರ್ಘಟನೆ ನಡೆದಿದೆ. ಮೃತರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. 12 ಜನ ಮಹಿಳೆರು ಹಾಗೂ ಚಾಲಕ ಸೇರಿ ಒಟ್ಟು 13 ಮಂದಿ ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮ ಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ ಆಳದ ಕಂದಕಕ್ಕೆ ಜೀಪ್ ಉರುಳಿಬಿದ್ದಿದೆ. ಘಟನಾ ಸ್ಥಳ ಕಲ್ಲಿನ ಭೂಪ್ರದೇಶವಾಗಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿತ್ತು.
ಅಲ್ಲದೇ, ಈ ಪ್ರದೇಶ ಕಲ್ಲುಗಳಿಂದ ಕೂಡಿರುವುದರಿಂದ ಮೃತರು ಹಾಗೂ ಗಾಯಾಳುಗಳ ತಲೆಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸಾವುನೋವಿಗೆ ಇದು ಮುಖ್ಯ ಕಾರಣವಾಗಿದೆ. ಈ ಪೈಕಿ 6 ಮಂದಿಯ ಗುರುತು ಪತ್ತೆಯಾಗಿದೆ. ಉಮಾ, ರಾಣಿ, ಶಾಂತ, ರಬಿಯಾ, ಶಜಾ ಹಾಗೂ ಲೀಲಾ ಎಂದು ಗುರುತಿಸಲಾಗಿದೆ. ಇವೆರಲ್ಲರೂ ಇಲ್ಲಿನ ಕಂಬಮಾಳ ಹಾಗೂ ತವಿಂಜಾಲ್ ಪಂಚಾಯತ್ ವ್ಯಾಪ್ತಿಯ ನಿವಾಸಿಗಳೆಂದು ತಿಳಿದುಬಂದಿದೆ.