ಪಣಜಿ (ಗೋವಾ): ಗೋವಾದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ, ದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಕಳವಳ ವ್ಯಕ್ತವಾಗಿದೆ. ಸಮಸ್ಯೆಯು ಭದ್ರತೆಗೆ ಸಂಬಂಧಿಸಿರುವುದರಿಂದ, ಸರ್ಕಾರವನ್ನು ಪ್ರಶ್ನಿಸಲಾಗುತ್ತಿದೆ. ಆದರೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೀಡಿದ ಹೇಳಿಕೆಯು ಇದೀಗ ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ.
ಕಳೆದ ಭಾನುವಾರ ಗೋವಾದ ಕಡಲತೀರದಲ್ಲಿ ಇಬ್ಬರು ಬಾಲಕಿಯರು ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಆದರೆ, ಅದರ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿದಾಗ ಅವರು ಹುಡುಗಿಯರು ಮತ್ತು ಅವರ ಕುಟುಂಬದವರನ್ನು ದೂಷಿಸಿದ್ದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದೇನು?
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹುಡುಗಿಯರು ಇಷ್ಟು ದಿನ ಏಕೆ ಹೊರಗಿದ್ದರು ಮತ್ತು ಅವರ ಮಕ್ಕಳ ಸುರಕ್ಷತೆಯನ್ನು ಕಾಪಾಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿಯ ಈ ಹೇಳಿಕೆಯನ್ನು ರಾಜಕೀಯ ಪಕ್ಷಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ಖಂಡಿಸಲಾಗುತ್ತಿದೆ. ಗೋವಾ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ವಿಷಯದ ಬಗ್ಗೆ ಹೇಳಿಕೆ ನೀಡುತ್ತಾ, ರಾತ್ರಿ ವೇಳೆ ಹುಡುಗಿಯರು ಸಮುದ್ರತೀರದಲ್ಲಿ ನಡೆಯುತ್ತಿದ್ದರೆ, ಅವರ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಪ್ರಶ್ನೆ ಎತ್ತಿದ ಪ್ರತಿಪಕ್ಷ, ಸಿಎಂ ರಾಜೀನಾಮೆಗೆ ಒತ್ತಾಯ:
ಪ್ರತಿಪಕ್ಷದವರು ಗೋವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಹಾಗೂ ಮುಖ್ಯಮಂತ್ರಿಯ ಹೇಳಿಕೆ ಖಂಡಿಸಿ, ಅದನ್ನೇ ಅಸ್ತ್ರವಾಗಿ ಮಾಡಿಕೊಳ್ಳಲಾರಿಂಬಿಸಿದ್ದಾರೆ. ಕಾಂಗ್ರೆಸ್ ವಕ್ತಾರ ಎಲ್ಟನ್ ಡಿ'ಕೋಸ್ತಾ, ನಾವು ಹೊರಗೆ ಹೋಗಲು ಏಕೆ ಹೆದರಬೇಕು? ಗೋವಾದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಲ್ಲ. ಕ್ರಿಮಿನಲ್‌ಗಳು ಜೈಲಿನಲ್ಲಿರಬೇಕು. ಇದರಿಂದ ಕಾನೂನು ಪಾಲಿಸುವ ಜನರು ಮುಕ್ತವಾಗಿ ಹೊರಗೆ ತಿರುಗಾಡಬಹುದು ಎಂದಿದ್ದಾರೆ.
ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ, ಮುಖ್ಯಮಂತ್ರಿಯವರ ಹೇಳಿಕೆ ಪೂರ್ವಗ್ರಹ ಪೀಡಿತವಾಗಿದೆ. ನಾಗರಿಕರ ಸುರಕ್ಷತೆಯ ಜವಾಬ್ದಾರಿ ಪೊಲೀಸ್ ಮತ್ತು ರಾಜ್ಯ ಸರ್ಕಾರದ ಮೇಲಿದೆ. ಅವರು ನಮ್ಮನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
ನಾವು ನೇರವಾಗಿ ಪೊಲೀಸರನ್ನು ದೂಷಿಸುತ್ತೇವೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. 10 ಹುಡುಗಿಯರು ಬೀಚ್ ಪಾರ್ಟಿಗೆ ಹೋಗುತ್ತಾರೆ, ಅವರಲ್ಲಿ 4 ಜನರು ಸಮುದ್ರ ತೀರದಲ್ಲಿ ತಂಗುತ್ತಾರೆ ಮತ್ತು 6 ಹುಡುಗಿಯರು ಮನೆಗೆ ಮರಳುತ್ತಾರೆ. ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ ಸಮುದ್ರ ತೀರದಲ್ಲಿ ರಾತ್ರಿ ತಂಗಿದ್ದರು. ಮಕ್ಕಳು ಸಮುದ್ರತೀರದಲ್ಲಿ ಅಷ್ಟು ಹೊತ್ತು ಕಳೆಯಬಾರದು. ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಾವಂತ್ ವಿಧಾನಸಭೆಗೆ ತಿಳಿಸಿದ್ದಾರೆ.