ನವದೆಹಲಿ/ಕೋಟಾ (ರಾಜಸ್ಥಾನ): ಭಾರತ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಪ್ರವೇಶ ಪಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ಸ್ ಫಲಿತಾಂಶ ಇಂದು ಪ್ರಕಟವಾಗಿದೆ. ಅತ್ಯಂತ ಕಠಿಣ ಎಂದೇ ಪರಿಗಣಿಸಲಾದ ಪರೀಕ್ಷೆಯಲ್ಲಿ 20 ಮಂದಿ 100ಕ್ಕೆ 100 ಅಂಕ ಪಡೆದಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಶೇ.100ರಷ್ಟು ಅಂಕ ಪಡೆದ ಎಲ್ಲರೂ ಕೂಡ ಪುರುಷ ಅಭ್ಯರ್ಥಿಗಳೇ ಆಗಿದ್ದಾರೆ. 20 ಟಾಪರ್ಗಳಲ್ಲಿ 14 ಮಂದಿ ಸಾಮಾನ್ಯ, ನಾಲ್ವರು ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್) ಮತ್ತು ಪರಿಶಿಷ್ಟ ಜಾತಿ ಕೋಟಾದಲ್ಲಿ ತಲಾ ಒಬ್ಬರು ಉತ್ತೀರ್ಣರಾಗಿದ್ದಾರೆ. 50 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಜನವರಿಯಲ್ಲಿ ನಡೆದ ಮೊದಲ ಆವೃತ್ತಿಯ ಜೆಇಇ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆಯನ್ನು ದಾಖಲೆಯ 8.23 ಲಕ್ಷ ಜನ ವಿದ್ಯಾರ್ಥಿಗಳು ಬರೆದಿದ್ದರು. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮರಾಠಿ, ಉರ್ದು ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಭಾರತ ಮಾತ್ರವಲ್ಲ ಅಮೆರಿಕ, ಸಿಂಗಾಪುರ ಸೇರಿದಂತೆ 17 ಹೊರ ದೇಶಗಳಲ್ಲೂ ಪರೀಕ್ಷೆ ಆಯೋಜಿಸಲಾಗಿತ್ತು. ಎರಡನೇ ಆವತ್ತಿಯ ಜೆಇಇ ಪರೀಕ್ಷೆ ಏಪ್ರಿಲ್ನಲ್ಲಿ ನಡೆಯಲಿದೆ.
20 ಟಾಪರ್ ವಿದ್ಯಾರ್ಥಿಗಳಿವರು..:ಫಲಿತಾಂಶದ 20 ಟಾಪರ್ಗಳ ಮಾಹಿತಿ ಹೀಗಿದೆ... ಅಭಿನೀತ್ ಮೆಜೆಟಿ, ಅಮೋಘ ಜಲನ್, ಅಪೂರ್ವ ಸಮೋತಾ, ಆಶಿಕ್ ಸ್ಟೆನ್ನಿ, ಡಿ.ಅಭಿನವ್ ಚೌಧರಿ, ದೇಶಂಕ್ ಪ್ರತಾಪ್ ಸಿಂಗ್, ಧ್ರುವ ಸಂಜಯ್ ಜೈನ್, ಜ್ಞಾನೇಶ್ ಹೇಮೇಂದ್ರ ಶಿಂಧೆ, ದುಗ್ಗಿನೇನಿ ವೆಂಕಟ್ ಯುಗೇಶ್, ಗುಲ್ಶನ್ ಕುಮಾರ್, ಗುತ್ತಿಕೊಂಡ ಅಭಿರಾಮ್, ಕೌಶಲ್ ವಿಜಯ್ವರ್ಗಿಯ, ಕ್ರಿಷ್ ಗುಪ್ತಾ, ಮಯಾಂಕ್ ಸನ್, ಎನ್.ಕೆ.ವಿಶ್ವಜಿತ್, ನಿಪುನ್ ಗೋಯೆಲ್, ರಿಷಿ ಕಲ್ರಾ, ಸೋಹಂ ದಾಸ್, ಸುತಾರ್ ಹರ್ಷುಲ್ ಸಂಜಯ್ಭಾಯ್ ಹಾಗೂ ಡಿ.ಸಿ.ರೆಡ್ಡಿ.