ನವದಹೆಲಿ:ಕಳೆದ ವರ್ಷವಷ್ಟೇ ವಿಧಾನಸಭೆ ಚುನಾವಣೆ ಮುಗಿಸಿರುವ ಬಿಹಾರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿದ್ದು, ಎಲ್‌ಜೆಪಿ ಮಿಂಚಿನ ವಿದ್ಯಮಾನಗಳು ನಡೆಯುತ್ತಿವೆ. ಲೋಕ ಜನಶಕ್ತಿ ಪಕ್ಷದ ಜವಾಬ್ದಾರಿ ಹೊತ್ತಿದ್ದ ಚಿರಾಗ್ ಪಾಸ್ವಾನ್ ಬದಲಾಗಿ ಅವರ ಚಿಕ್ಕಪ್ಪ ಪಶುಪತಿ ಪಾಸ್ವಾನ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
2020ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನರಾದ ಬಳಿಕ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪುತ್ರ ಚಿರಾಗ್ ಪಾಸ್ವಾನ್ ವಹಿಸಿದ್ದರು. ಇದೀಗ ಪಕ್ಷದ ಉನ್ನತ ಸ್ಥಾನದಿಂದ ಅವರನ್ನು ದೂರ ಸರಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದ್ದು, ಪಕ್ಷದ 6 ಮಂದಿ ಸಂಸದರ ಪೈಕಿ ಐವರು ಚಿರಾಗ್ ವಿರುದ್ಧ ತಿರುಗಿಬಿದ್ದಿರುವುದು. ಚಿರಾಗ್ ಅವರ ಸಂಬಂಧಿ ಹಾಗೂ ಸಂಸದರಾದ ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಹಾಗೂ ಮೆಹಬೂಬ್ ಅಲಿ ಕೈಸರ್ ಚಿರಾಗ್ ವಿರುದ್ಧ ರೆಬಲ್‌ಗಳಾಗಿದ್ದಾರೆ. ಈ ಎಲ್ಲ ಸಂಸದರ ಗ್ಯಾಂಗ್ ಈಗಾಗಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ವಿಧಾನಸಭೆ ಚುನಾವಣೆ ವೇಳೆ, ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಇದೀಗ ಅಚ್ಚರಿ ಎಂಬಂತೆ ಪಶುಪತಿ ಅವರನ್ನು ಲೋಕಸಭೆಯಲ್ಲಿ ತಮ್ಮ ಪಕ್ಷದ ನಾಯಕರನ್ನು ಮಾಡಲಾಗಿದೆ. ಪಶುಪತಿ ಅವರು ಸಿಎಂ ನಿತೀಶ್ ಕುಮಾರ್ ಅವರ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಎಲ್‌ಜೆಪಿ ಮತ್ತೆ ನಿತೀಶ್ ಕುಮಾರ್‌ಗೆ ಬೆಂಬಲ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.