ನವದೆಹಲಿ:ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಡಿದ್ದ ಒಂದು ಟ್ವೀಟ್ ಬುಧವಾರ ಭಾರಿ ಸಂಚಲನವನ್ನು ಮೂಡಿಸಿದೆ. ದಾದಾ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆಯುತ್ತಾರೆ ಮತ್ತು ರಾಜಕೀಯಕ್ಕೆ ಸೇರುತ್ತಾರೆ ಎಂಬ ದೊಡ್ಡ ಮಟ್ಟದ ಚರ್ಚೆಯನ್ನೂ ಟ್ವೀಟ್ ಹುಟ್ಟು ಹಾಕಿದೆ. ಆದರೆ, ಇದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
'1992ರಲ್ಲಿ ಆರಂಭವಾದ ನನ್ನ ಕ್ರಿಕೆಟ್ ವೃತ್ತಿ ಜೀವನ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನ ಕ್ರಿಕೆಟ್ ವೃತ್ತಿಬದುಕಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ' ಎಂದು ದಾದಾ ಟ್ವೀಟ್ ಮಾಡಿರುವುದೇ ಇಷ್ಟೆಲ್ಲ ಊಹಾಪೋಹಗಳಿಗೂ ಕಾರಣವಾಗಿದೆ.
'ನನ್ನ ಕ್ರಿಕೆಟ್ ವೃತ್ತಿ ಬದುಕಿನೊಂದಿಗೆ ಜೊತೆಯಾದ ಮತ್ತು ಇಂದು ನಾನು ಈ ಸ್ಥಾನಕ್ಕೆ ಬರಲು ಬೆಂಬಲಿಸಿದ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಇವತ್ತು, ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ. ಇದು ಹಲವರಿಗೆ ನೆರವಾಗಲಿದೆ ಎಂಬ ಭಾವನೆ ನನ್ನಲ್ಲಿದೆ. ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನನಗೆ ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಗಂಗೂಲಿ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಅಂಗಳದಿಂದ ರಾಜಕೀಯಕ್ಕೆ?: ದಾದಾ ಮಾಡಿದ್ದ ಈ ಟ್ವೀಟ್ ಕ್ರಿಕೆಟ್ ಮಾತ್ರವಲ್ಲದೇ ರಾಜಕೀಯದಲ್ಲೂ ಸಂಚಲನ ಸೃಷ್ಟಿಸುವಂತೆ ಮಾಡಿತ್ತು. ಯಾಕೆಂದರೆ ಹಲವು ದಿನಗಳಿಂದಲೂ ಗಂಗೂಲಿ ರಾಜಕೀಯಕ್ಕೆ ಬರುತ್ತಾರೆ ಮತ್ತು ಅವರನ್ನು ಸೆಳೆಯಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೆಲ ವರ್ಷಗಳಿಂದಲೂ ಸುಳಿದಾಡುತ್ತಿವೆ.