ಲಂಡನ್(ಬ್ರಿಟನ್): ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಕೊನೆಯ ವೈಸ್ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಹಾಗೂ ಅವರ ಪತ್ನಿ ಎಡ್ವಿನಾ ಮೌಂಟ್‌ಬ್ಯಾಟನ್ ಅವರ ನಡುವಿನ ವೈಯಕ್ತಿಕ ಪತ್ರಗಳು ಮತ್ತು ಡೈರಿಗಳಲ್ಲಿನ ಕೆಲವು ಅಂಶಗಳನ್ನು ಬಹಿರಂಗಪಡಿಸುವ ಕೋರಿಕೆಯನ್ನು ಮಾಹಿತಿ ಹಕ್ಕುಗಳ ವಿಚಾರಣೆ ನಡೆಸುವ ಬ್ರಿಟನ್‌ನ ಪ್ರಥಮ ದರ್ಜೆ ನ್ಯಾಯಮಂಡಳಿ ತಿರಸ್ಕರಿಸಿದೆ.
ನ್ಯಾಯಾಧೀಶರಾದ ಸೋಫಿ ಬಕ್ಲೆ ಎಂಬುವವರು ಬ್ರಿಟನ್‌ನ ಪ್ರಥಮ ದರ್ಜೆ ನ್ಯಾಯಮಂಡಳಿಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. 1930ರ ದಶಕದ ಹಿಂದಿನ ಡೈರಿಗಳು ಮತ್ತು ಪತ್ರ ವ್ಯವಹಾರಗಳಲ್ಲಿನ ಕೆಲವು ಅಂಶಗಳನ್ನು ಬಹಿರಂಗಪಡಿಸಬೇಕೆಂದು ಖ್ಯಾತ ಬ್ರಿಟಿಷ್ ಇತಿಹಾಸಕಾರ ಆಂಡ್ರ್ಯೂ ಲೋನಿ ಅರ್ಜಿ ಸಲ್ಲಿಸಿದ್ದರು.
ಸೌತಾಂಪ್ಟನ್ ವಿಶ್ವವಿದ್ಯಾಲಯವು 2011ರಲ್ಲಿ 'ಬ್ರಾಡ್‌ಲ್ಯಾಂಡ್ಸ್ ಆರ್ಕೈವ್' ಹೆಸರಿನಲ್ಲಿ ಸುಮಾರು 27 ಕೋಟಿ ರೂಪಾಯಿಗಳಿಗೆ ಮೌಂಟ್‌ಬ್ಯಾಟನ್ ಕುಟುಂಬದಿಂದ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿತ್ತು. 19ನೇ ಮತ್ತು 20ನೇ ಶತಮಾನಗಳಲ್ಲಿ ಬ್ರಿಟಿಷ್ ರಾಜಕೀಯ ಇತಿಹಾಸ ಪ್ರಮುಖ ಮೂಲಗಳೆಂದು ಪರಿಗಣಿಸಲಾದ ಈ ಆರ್ಕೈವ್‌ನಲ್ಲಿರುವ ದಾಖಲೆಗಳನ್ನು ಬಹಿರಂಗಪಡಿಸಲು ಸೌತಾಂಪ್ಟನ್ ವಿಶ್ವವಿದ್ಯಾಲಯ ಉದ್ದೇಶಿಸಿತ್ತು. ಅದರಲ್ಲಿರುವ ವಿಷಯಗಳು ಪ್ರಮುಖವಾಗಿರುವ ಕಾರಣದಿಂದ ಅವುಗಳನ್ನು ಪರಿಶೀಲನೆಗೆ ಕ್ಯಾಬಿನೆಟ್ ಕಚೇರಿಗೆ ಕಳಿಸಿಕೊಡಲಾಗಿತ್ತು.
ಇನ್ನೂ ಖಾಸಗಿ ಒಡೆತನದಲ್ಲಿವೆ: ಇದೇ ವೇಳೆ ಬ್ರಿಟಿಷ್ ಇತಿಹಾಸಕಾರ ಆಂಡ್ರ್ಯೂ ಲೋನಿ ಅವರು ಆರ್ಕೈವ್ ಅನ್ನು ಬಹಿರಂಗಪಡಿಸಲು ಮಾಹಿತಿ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಬ್ರಾಡ್‌ಲ್ಯಾಂಡ್ಸ್ ಆರ್ಕೈವ್ ಅನ್ನು ಬಹಿರಂಗಪಡಿಸಲು ಸೌತಾಂಪ್ಟನ್ ವಿಶ್ವವಿದ್ಯಾಲಯಕ್ಕೆ 2019ರಲ್ಲಿ ಆದೇಶ ನೀಡಲಾಗಿತ್ತು. ಆರ್ಕೈವ್ಸ್‌ನಲ್ಲಿರುವ ಲೇಡಿ ಮೌಂಟ್‌ಬ್ಯಾಟನ್ ಮತ್ತು ನೆಹರೂ ನಡುವಿನ ಕೆಲವು ಪತ್ರಗಳು ಮತ್ತು ಡೈರಿಗಳು ಇನ್ನೂ ಖಾಸಗಿ ಒಡೆತನದಲ್ಲಿದೆ. ಆರ್ಕೈವ್‌ನಲ್ಲಿರುವ ಗೌಪ್ಯತೆಯಿದ್ದರೂ, ಅವುಗಳನ್ನು ಕೊಳ್ಳಲು ಮುಂದಾಗಿದ್ದು, ನಂತರ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿಕೆ ನೀಡಿದೆ.