ಮೀರತ್(ಉತ್ತರ ಪ್ರದೇಶ): ಭಾನುವಾರ ನಡೆದ 2022ರ ಕಾಮನ್ವೆಲ್ತ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಅನ್ನು ರಾಣಿ ಬಹದ್ದೂರು ಜಿಲ್ಲೆಯ ಮಗಳು. ಸೌಲಭ್ಯಗಳ ಕೊರತೆಯಿಂದಾಗಿ ತಂದೆ ತನ್ನ ಮಗಳಿಗೆ ಜಾವೆಲಿನ್ ಆಡಲು ಅನುಮತಿ ನಿರಾಕರಿಸಿದ್ದ ಸಂದರ್ಭವೂ ಇತ್ತಂತೆ. ಆದರೆ ಅದೆಲ್ಲವನ್ನೂ ಮೆಟ್ಟಿ, ಛಲ ಬಿಡದೆ ಸಾಧಿಸಿ ಇಂದು ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿ ನಿಂತಿದ್ದಾರೆ ಅನ್ನು ರಾಣಿ.
ಜಾವೆಲಿನ್ ಥ್ರೋ ಆಟದಲ್ಲಿ ಭಾರತದ ಮಹಿಳೆಯೊಬ್ಬರು ಪದಕ ಗೆದ್ದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಈ ಕೀರ್ತಿಗೆ ಪಾತ್ರರಾಗುವ ಮೂಲಕ ಅನ್ನು ರಾಣಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಮೀರತ್ನಲ್ಲಿ ಬಹದ್ದೂರ್ಪುರ ಗ್ರಾಮವೊಂದಿದೆ. ಅಲ್ಲೊಂದು ಸಾಧನೆಯ ಕನಸಿದೆ ಎಂಬುದನ್ನು ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದಾರೆ ಈ ರಾಣಿ. 82 ವರ್ಷಗಳಿಂದ ದೇಶ ನಿರೀಕ್ಷಿಸಿದ್ದನ್ನು ಈಕೆ ಸಾಧಿಸಿ ತೋರಿಸಿದ್ದಾರೆ.
ಜಾವೆಲಿನ್ ಥ್ರೋ ಕಂಚು ಪದಕ ವಿಜೇತೆ ಅನ್ನು ರಾಣಿ ಅದೆಷ್ಟೋ ಕಷ್ಟದ ಸನ್ನಿವೇಶಗಳನ್ನು ಎದುರಿಸಿದರೂ, ಅದ್ಯಾವುದಕ್ಕೂ ಧೈರ್ಯ ಕಳೆದುಕೊಳ್ಳದೆ, ಅಡೆತಡೆಗಳನ್ನು ಮೀರಿ ಕಾಮನ್ವೆಲ್ತ್ ಕ್ರೀಡಕೂಟದಲ್ಲಿ ಕಂಚಿನ ಪದಕ ಗೆದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಸಾಧಕಿಯ ಸಾಧನೆಯ ಹಿಂದಿನ ಪ್ರಯತ್ನಗಳು, ನೋವುಗಳು, ಖುಷಿಯ ಕ್ಷಣಗಳಿಗೆ ಈಟಿವಿ ಭಾರತ ಕಿವಿಯಾಗಿದ್ದು, ಸಂದರ್ಶನದ ಸಾರಾಂಶ ಇಲ್ಲಿದೆ.
ಬಡತನವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ: ನಾನು ಕ್ರೀಡೆಯತ್ತ ಆಸಕ್ತಳಾಗುವುದನ್ನು ತಂದೆ ಪ್ರಾರಂಭದಿಂದಲೂ ನಿರಾಕರಿಸುತ್ತಿದ್ದರು. ಯಾಕೆಂದರೆ ನನಗೆ ಐವರು ಒಡಹುಟ್ಟಿದವರಿದ್ದಾರೆ. ಅವರೆಲ್ಲರನ್ನು ಸಾಕಲು ತಂದೆಯೊಬ್ಬರೇ ದುಡಿಯಬೇಕು. ಅದರ ನಡುವಲ್ಲಿ ನನ್ನ ಕ್ರೀಡಾಸಕ್ತಿಗೆ ಖರ್ಚು ಮಾಡುವುದು ಕಷ್ಟದ ಮಾತಾಗಿತ್ತು. ಸ್ವಲ್ಪ ಜಮೀನಿದೆ ನಮಗೆ ಅದರಲ್ಲೇ ತಂದೆ ಹೇಗೋ ಕೃಷಿ ಮಾಡುತ್ತಾ ಕುಟುಂಬದ ಖರ್ಚನ್ನು ನಿಭಾಯಿಸುತ್ತಿದ್ದರು.
ನಾನು ಎಲ್ಲಾದರೂ ಖಾಲಿ ಜಾಗ ಇದ್ದರೆ ಅಲ್ಲಿ ಕಬ್ಬು, ಬಿದಿರು ಹಿಡಿದು ಅಭ್ಯಾಸ ಮಾಡುತ್ತಿದ್ದೆ. ಬಡತನವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಸಂಪನ್ಮೂಲಗಳ ಕೊರತೆಯಲ್ಲೂ ನನ್ನ ಕನಸನ್ನು ನನಸು ಮಾಡಲು ಪ್ರಯತ್ನಿಸಿದ್ದೇನೆ. 2010ರಿಂದ ಏನಾದರೂ ಸಾಧಿಸಲೇಬೇಕು ಎಂಬ ಹಠದಿಂದ ರಹಸ್ಯವಾಗಿಯೇ ಗುರಿ ಸಾಧನೆಗೆ ತಯಾರಿ ನಡೆಸುತ್ತಿದ್ದೆ ಎಂದು ಹೇಳುತ್ತಾರೆ ಕಂಚಿನ ಮಹಿಳೆ.
ಹಸಿದ ಹೊಟ್ಟೆಲ್ಲೇ ಸ್ಪರ್ಧೆ ಗೆದ್ದಿದ್ದೆ :ಮನೆಯಲ್ಲಿ ಆರ್ಥಿಕ ಅಡಚಣೆ ಇದೆ, ನಿನ್ನ ಕ್ರೀಡಾಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ಕಷ್ಟ ಎಂದು ಮನೆಯವರು ಹೇಳಿದ್ದರು. ಆದರೆ ಆ ವೇಳೆ ಅವರ ಶಾಲೆಯ ಪಿಟಿಐ ಹಾಗೂ ಸಮೀಪದ ಆಶ್ರಮದ ಸ್ವಾಮೀಜಿ ಕುಟುಂಬದವರಿಗೆ ನನ್ನ ಕನಸುಗಳು, ಅದಕ್ಕೆ ಬೇಕಾಗಿರುವ ಪ್ರೋತ್ಸಾಹದ ಬಗ್ಗೆ ವಿವರಿಸಿದ್ದರು. ಅದರ ನಂತರ ತಂದೆ ಯಾವುದೇ ಪರಿಸ್ಥಿತಿಯಲ್ಲಿದ್ದರೂ ನನ್ನನ್ನು ಬೆಂಬಲಿಸುತ್ತಾ ಬಂದರು. ನನ್ನ ಕುಟುಂಬ ನನ್ನನ್ನು ಅಪಾರವಾಗಿ ನಂಬಿದೆ. ಜೊತೆಗೆ ನನ್ನ ಮಾರ್ಗದರ್ಶಕರು ಸಹ ನನ್ನ ಅಗತ್ಯಗಳನ್ನು, ಓದಲು ಬೇಕಾಗಿದ್ದ ಆರ್ಥಿಕ ಸಹಾಯ ಮಾಡಿದ್ದಾರೆ.
ಕೆಲವು ಬಾರಿ ಅಗತ್ಯ ವಸ್ತುಗಳಿಲ್ಲದೆ ಹಸಿದ ಹೊಟ್ಟೆಯಲ್ಲಿ ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಿದೆ. ರೈಲಿನಲ್ಲಿ ನೆಲದ ಮೇಲೆ ಮಲಗಿ ಕನಸನ್ನು ನನಸು ಮಾಡಿಕೊಳ್ಳಲು ಪ್ರಯಾಣಿಸಿದ್ದೂ ಇದೆ. ಒಂದು ಬಾರಿ ಗಾಯಗೊಂಡಾಗ ಎಲ್ಲವೂ ಇಲ್ಲಿಗೆ ಮುಗಿಯಿತು ಅಂದುಕೊಂಡಿದ್ದೆ. ಆದರೆ ಕುಟುಂಬ ಮತ್ತು ಶಿಕ್ಷಕರು ನೈತಿಕ ಸ್ಥೈರ್ಯ ಹೆಚ್ಚಿಸುವ ಮೂಲಕ ನನ್ನನ್ನು ಮತ್ತೆ ಗುರಿಯತ್ತ ಹುರಿದುಂಬಿಸಿದ್ದರು. ಅದರ ಪರಿಣಾಮವಾಗಿ, ಇಂದು 82 ವರ್ಷಗಳ ನಂತರ ದೇಶಕ್ಕೆ ಜಾವೆಲಿನ್ನಲ್ಲಿ ಮೊದಲ ಬಾರಿಗೆ ಪದಕ ತಂದುಕೊಟ್ಟ ಮೊದಲ ಮಹಿಳಾ ಆಟಗಾರ್ತಿಯಾಗಿ ನಿಂತಿದ್ದೇನೆ.
ಈಗ ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತೇನೆ:ಇತರ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿಯನ್ನು ಭೇಟಿಯಾಗಲಿರುವ ಅಣ್ಣು ರಾಣಿ, ಈಗ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ತಯಾರಿ ಪ್ರಾರಂಭಿಸುತ್ತೇನೆ ಎಂದಿದ್ದಾರೆ. ಆಟಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಮಾಡುತ್ತಿರುವ ಪ್ರಯತ್ನಗಳನ್ನು ಸಹ ರಾಣಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ :ಚಿನ್ನದ ಹುಡುಗಿ ಮೀರಾಬಾಯಿ ಚಾನು ಹುಟ್ಟುಹಬ್ಬ: ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಹೀಗೆ..