ಬೆಂಗಳೂರು:ಸಿಡಿ ಪ್ರಕರಣ ಸಂಬಂಧ 'ಕುಂಬಳಕಾಯಿ ಕಳ್ಳ ಅಂದ್ರೆ, ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ'. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಆರು ಸಚಿವರು ಮುಂದುವರೆಯಲು ಅನರ್ಹರಾಗಿದ್ದು, ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲೈಂಗಿಕ ಹಗರಣ ಸಿಡಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದೆ. ಆರು ಮಂದಿ ಮಂತ್ರಿಗಳು ಸಿವಿಲ್ ಕೋರ್ಟ್‌ಗೆ ಹೋಗಿ ಇಂಜಕ್ಷನ್ ತಂದಿದ್ದಾರೆ. ಯಾವುದೇ ಖಾಸಗಿ ಆಕ್ಷೇಪ ಇಲ್ಲದೆ ರಮೇಶ್ ಜಾರಕಿಹೊಳಿ ರೀತಿಯಲ್ಲಿ ನಮಗೂ ಆಗಬಹುದೆಂದು ಆತಂಕಗೊಂಡು ಕೋರ್ಟ್‌ಗೆ ಹೋಗಿದ್ದಾರೆ ಎಂದರು.
ಭಯ, ರಾಗದ್ವೇಶ ಇಲ್ಲದೆ ನಿಷ್ಪಕ್ಷ್ಯಪಾತವಾಗಿ ಕೆಲಸ ಮಾಡುವುದಾಗಿ ಹೇಳಿ ಪ್ರಮಾಣವಚನ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಮಾನಹಾನಿ ಆಗಬಹುದೆಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಮಾರ್ಚ್ 2 ರಿಂದ 9 ರವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಷಡ್ಯಂತ್ರವೆಂದು ರಮೇಶ್ ಜಾರಕಿಹೊಳಿ ಗೃಹ ಸಚಿವರಿಗೆ ಪತ್ರ ಬರೆದು ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಎಡಿಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ಮಾಡಿ, ವರದಿ ಕೊಡುವಂತೆ ಹೇಳಿದ್ದಾರೆ. ಆದರೆ, ಪತ್ರದಲ್ಲಿ ಸಿಡಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.