ಕರ್ನಾಟಕ

karnataka

ETV Bharat / bharat

14ನೇ ಶೃಂಗಸಭೆ.. ಭಾರತ - ಜಪಾನ್ ಸಂಬಂಧ, ಸಹಕಾರಕ್ಕೆ ಮತ್ತಷ್ಟು ಬಲ - ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ

14ನೇ ವಾರ್ಷಿಕ ಶೃಂಗಸಭೆಯಲ್ಲಿ ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.

Japan PM Fumio Kishida
ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ

By

Published : Mar 19, 2022, 11:05 AM IST

Updated : Mar 19, 2022, 11:23 AM IST

ನವದೆಹಲಿ: ಅಧಿಕಾರ ಸ್ವೀಕರಿಸಿದ ನಂತರ 14ನೇ ವಾರ್ಷಿಕ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಭಾಗವಹಿಸುತ್ತಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ನಡುವೆಯೂ ನವದೆಹಲಿಯಲ್ಲಿ ಎರಡು ದಿನಗಳ ಸಭೆಗೆ ತಂಗಿರುವ ಕಿಶಿಡಾ, ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.

ಕಳೆದ ಬಾರಿ ಭಾರತ - ಜಪಾನ್ ವಾರ್ಷಿಕ ಶೃಂಗಸಭೆಯು ಅಕ್ಟೋಬರ್ 2018ರಲ್ಲಿ ಟೋಕಿಯೋದಲ್ಲಿ ನಡೆದಿತ್ತು. ಉಕ್ರೇನ್​ ಮೇಲಿನ ರಷ್ಯಾ ದಾಳಿ, ತೈಲ ಬೆಲೆ ಬಿಕ್ಕಟ್ಟು, ಯುದ್ಧದ ಪರಿಣಾಮಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ವಿಚಾರವಾಗಿ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸುತ್ತಿರುವುದರ ಮಧ್ಯೆ ಕಿಶಿದಾ ಅವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ. ಇನ್ನು ಭಾರತ ಮತ್ತು ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ವಿಷಯದಲ್ಲಿ ಉತ್ತಮ ಸಹಕಾರ, ಸಂಬಂಧವನ್ನು ಇಟ್ಟುಕೊಂಡಿದೆ.

ಶೃಂಗಸಭೆಯು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಲು, ಸಂಬಂಧವನ್ನು ಬಲಪಡಿಸಲು, ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ತಮ್ಮ ಪಾಲುದಾರಿಕೆ ಮುನ್ನಡೆಸಲು, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಜಪಾನ್ ಪ್ರಧಾನಿ ಅಧಿಕಾರ ವಹಿಸಿಕೊಂಡ ಕೂಡಲೇ 2021ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಅವರು ಪಿಎಂ ಕಿಶಿಡಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಉಭಯ ಪ್ರಧಾನಿಗಳು, ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಮತ್ತಷ್ಟು ಬಲಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ನೀರಿನ ಟ್ಯಾಂಕ್​ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ.. ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸುಟ್ಟು ಭಸ್ಮ!

2014ರಲ್ಲಿ ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ನೀಡಿದ ನಂತರ ಎರಡೂ ದೇಶಗಳು ತೆಗೆದುಕೊಂಡ ಹಲವಾರು ಪ್ರಮುಖ ನಿರ್ಧಾರಗಳ ಅನುಷ್ಠಾನದೊಂದಿಗೆ ಮಹತ್ತರವಾದ ಪ್ರಗತಿ ಸಾಧಿಸಲಾಗಿದೆ. ಆ ವೇಳೆ ಶಿಂಜೋ ಅಬೆ ಜಪಾನ್ ಪ್ರಧಾನಿಯಾಗಿದ್ದರು. ಜಪಾನ್ ಭಾರತಕ್ಕೆ 3.5 ಟ್ರಿಲಿಯನ್ ಯೆನ್ ಹೂಡಿಕೆ ಘೋಷಿಸಿತ್ತು. ಪ್ರಸ್ತುತ ಭಾರತದಲ್ಲಿ 1,455 ಜಪಾನಿ ಕಂಪನಿಗಳಿವೆ. ಹನ್ನೊಂದು ಜಪಾನ್ ಇಂಡಸ್ಟ್ರಿಯಲ್ ಟೌನ್‌ಶಿಪ್‌ಗಳನ್ನು (ಜೆಐಟಿ) ಸ್ಥಾಪಿಸಲಾಗಿದೆ. ಜಪಾನ್ ಭಾರತದ 5ನೇ ಅತಿದೊಡ್ಡ ಎಫ್‌ಡಿಐ ಮೂಲವಾಗಿದೆ.

ಜೊತೆಗೆ ಅತಿದೊಡ್ಡ ಅಭಿವೃದ್ಧಿ ಪಾಲುದಾರ ದೇಶ ಕೂಡ ಹೌದು. ಆದಾಗ್ಯೂ, ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್, ಡೆಡಿಕೇಟೆಡ್ ಫ್ರೈಟ್ ಕಾರಿಡಾರ್, ಮೆಟ್ರೋ ಯೋಜನೆಗಳು ಮತ್ತು ದೆಹಲಿ - ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆ ಸೇರಿದಂತೆ ಜಪಾನಿನ ನೆರವಿನೊಂದಿಗೆ ಪ್ರಸ್ತುತ ಹಲವಾರು ಮೂಲಸೌಕರ್ಯ ಯೋಜನೆಗಳು ನಡೆಯುತ್ತಿವೆ. ಇದೀಗ ಈ ಶೃಂಗಸಭೆಗೆಂದು ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಭಾರತಕ್ಕೆ ಆಗಮಿಸಿದ್ದು, ಉಭಯ ದೇಶಗಳ ಸಂಬಂಧ ಮತ್ತು ಸಹಕಾರ ಮತ್ತಷ್ಟು ಗಟ್ಟಿಯಾಗಲಿದೆ.


Last Updated : Mar 19, 2022, 11:23 AM IST

ABOUT THE AUTHOR

...view details