ಲಖನೌ(ಉತ್ತರ ಪ್ರದೇಶ): ಜಪಾನ್‌ನ ಪ್ರಸಿದ್ಧ ಹೋಟೆಲ್ ಗ್ರೂಪ್ ಹೋಟೆಲ್ ಮ್ಯಾನೇಜ್ ಮೆಂಟ್ ಇಂಟರ್ ನ್ಯಾಷನಲ್ ಕಂಪನಿ ಲಿಮಿಟೆಡ್ (ಎಚ್ ಎಂಐ) ಉತ್ತರ ಪ್ರದೇಶದಲ್ಲಿ 30 ಹೊಸ ಹೋಟೆಲ್ಗಳನ್ನು ಸ್ಥಾಪಿಸಲಿದೆ. ಲಖನೌದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಎರಡನೇ ದಿನದಂದು, ಜಪಾನಿನ ಕಂಪನಿಯು ಈ ನಿಟ್ಟಿನಲ್ಲಿ 7,200 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ:ಜಪಾನ್‌ನ ಪ್ರಮುಖ ನಗರಗಳಲ್ಲಿ 60 ಕ್ಕೂ ಹೆಚ್ಚು ಹೋಟೆಲ್ ಗಳನ್ನು ನಿರ್ವಹಿಸುತ್ತಿರುವ ಎಚ್ಎಂಐ ಗ್ರೂಪ್ನ ಸಾರ್ವಜನಿಕ ಸಂಪರ್ಕ ನಿರ್ದೇಶಕ ತಕಾಮೊಟೊ ಯೊಕೊಯಾಮಾ ಮಾತನಾಡಿ , ಉತ್ತರ ಪ್ರದೇಶದ ಪ್ರವಾಸೋದ್ಯಮ ಹೆಚ್ಚಿಸುವುದಕ್ಕಾಗಿ ಮಾಡುತ್ತಿರುವ ಪ್ರಯತ್ನಗಳು ಹೋಟೆಲ್ ಉದ್ಯಮಕ್ಕೆ ಅಪಾರ ಅವಕಾಶವನ್ನು ಸೃಷ್ಟಿಸಿವೆ. ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅಭಿವೃದ್ಧಿಯ ನಂತರ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಇದು ನಮಗೆ ಅನುಕೂಲಕರ ಅವಕಾಶವಾಗಿದೆ. ಯುಪಿಯ ಕೈಗಾರಿಕಾ ನೀತಿಗಳು ಎಚ್ಎಂಐ ಗುಂಪನ್ನು ಉತ್ತೇಜಿಸಲಿವೆ. ಹೀಗಾಗಿ ಎಚ್ಎಂಐ ಗ್ರೂಪ್ ತನ್ನ ಹೋಟೆಲ್ ಸರಪಳಿಯನ್ನು ಆಗ್ರಾ, ವಾರಾಣಸಿ ಮತ್ತು ಅಯೋಧ್ಯಾ ಸೇರಿದಂತೆ 30 ಪ್ರಮುಖ ಸ್ಥಳಗಳಿಗೆ ವಿಸ್ತರಿಸಲಿದೆ. ಇದು ಇಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳೂ ಸೃಷ್ಟಿ ಮಾಡಲಿದೆ’’ ಎಂದರು.
ಇದಕ್ಕೂ ಮುನ್ನ ದಧಿಚಿ ಸಭಾಂಗಣದಲ್ಲಿ ನಡೆದ ಉತ್ತರ ಪ್ರದೇಶದಲ್ಲಿ ಜಪಾನ್ ಮತ್ತು ಭಾರತದ ನಡುವೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವದ ಅನುಷ್ಠಾನ ಕುರಿತ ಮಹತ್ವದ ಗೋಷ್ಠಿ ನಡೆಯಿತು. 2015ರಲ್ಲಿ ಆಗಿನ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡಿದ್ದರೆ, 2016ರಲ್ಲಿ ಪ್ರಧಾನಿ ಮೋದಿ ಜಪಾನ್ಗೆ ಭೇಟಿ ನೀಡಿದ್ದರು. 2017 ರಲ್ಲಿ ಶಿಂಜೋ ಅಬೆ ಅಹಮದಾಬಾದ್ಗೆ ಆಗಮಿಸಿದಾಗ ಹೈಸ್ಪೀಡ್ ರೈಲುಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು. ನಂತರ 2018 ರಲ್ಲಿ ಪ್ರಧಾನಿ ಮೋದಿ ಮತ್ತೆ ಜಪಾನ್ಗೆ ತೆರಳಿದ್ದರು ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.