ಕರ್ನಾಟಕ

karnataka

ETV Bharat / bharat

ಜಂಗ್​ಪುರ ಜ್ಯುವೆಲ್ಲರ್​ನಿಂದ ಚಿನ್ನ ಕಳವು ಪ್ರಕರಣ: ಛತ್ತೀಸ್​ಗಢದ ಮೂವರು ಆರೋಪಿಗಳನ್ನು ಬಂಧಿಸಿದ ದೆಹಲಿ ಪೊಲೀಸರು - ಛತ್ತೀಸ್​ಗಢದ ಮೂವರು ಆರೋಪಿ

ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕದ್ದವರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Delhi Police arrests three accused from Chhattisgarh
ಛತ್ತೀಸ್​ಗಢದ ಮೂವರು ಆರೋಪಿಗಳನ್ನು ಬಂಧಿಸಿದ ದೆಹಲಿ ಪೊಲೀಸರು

By ETV Bharat Karnataka Team

Published : Sep 29, 2023, 8:10 PM IST

ನವದೆಹಲಿ: ದೆಹಲಿಯ ಹಜರತ್​ ನಿಜಾಮುದ್ದೀನ್​ ಪೊಲೀಸ್​ ಠಾಣಾ ವ್ಯಪ್ತಿಯ ಜಂಗ್​ಪುರದ ಉಮ್ರಾವ್​ ಸಿಂಗ್​ ಜ್ಯುವೆಲ್ಲರ್​ ಶೋರೂಂನಲ್ಲಿ ಇತ್ತೀಚೆಗೆ ನಡೆದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್​ಗಢದ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಛತ್ತೀಸ್​ಗಢದಿಂದ ದೆಹಲಿಗೆ ಕರೆತರುವ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

ಪ್ರಕರಣದ ಹಿನ್ನೆಲೆ:ಮಂಗಳವಾರ ದೆಹಲಿಯ ಜಂಗ್​ಪುರ ವ್ಯಾಪ್ತಿಯ ಆಭರಣ ಮಳಿಗೆಯೊಂದರಲ್ಲಿ ಕೋಟ್ಯಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಅಂದರೆ ಸುಮಾರು 30 ಕೆಜಿಗೂ ಹೆಚ್ಚು ಚಿನ್ನಾಭರಣವನ್ನು ಖದೀಮರು ದೋಚಿದ್ದರು. ಆ ಪ್ರಕರಣದಲ್ಲಿ ಈ ಮೂವರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಳಿಗೆಯ ಬಾಗಿಲು ಮುಚ್ಚಿದ್ದ ಮಾಲೀಕರು ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ಬೆಳಗ್ಗೆ ಮಳಿಗೆಯ ಬಾಗಿಲು ತೆರೆದಿದ್ದರು. ಬೆಳಗ್ಗೆ ಬಂದು ಬಾಗಿಲು ತೆರೆದಾಗ ಜ್ಯುವೆಲ್ಲರ್​ ಶೋರೂಂ ಗೋಡೆ ಕೊರೆದು ಒಳನುಗ್ಗಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು.

ಆಭರಣ ಮಳಿಗೆಯಿಂದ ಸುಮಾರು 20 ಕೋಟಿ ರೂ ಮೌಲ್ಯದ 30 ಕೆಜಿ ಚಿನ್ನಾಭರಣ ಹಾಗೂ 5 ಲಕ್ಷ ರೂ ನಗದು ಕಳ್ಳತನವಾಗಿತ್ತು ಎಂದು ಶೋರೂಂ ಮಾಲೀಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ವಿಷಯ ತಿಳಿದ ತಕ್ಷಣವೇ ಸ್ಥಳೀಯ ಪೊಲೀಸರು, ಪಿಸಿಆರ್​ ತಂಡ ಹಾಗೂ ಅಪರಾದ ಮತ್ತು ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಸಲುವಾಗಿ ಹಲವು ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ಮಳಿಗೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ವಿಶೇಷ ತನಿಖಾ ದಳಗಳು ತೀವ್ರ ತನಿಖೆಯನ್ನು ಆರಂಭಿಸಿದ್ದವು.

ಶೋರೂಂನ ಸ್ಟ್ರಾಂಗ್​ ರೂಮ್​ನ ಗೋಡೆಯನ್ನು ಆಯುಧಗಳಿಂದ ಕೊರೆದು ಒಳ ನುಗ್ಗಿದ್ದ ಕಳ್ಳರು ಅಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಕಳ್ಳತನ ವೇಳೆ ಕಳ್ಳರು ಸಿಸಿಟಿವಿ ಕ್ಯಾಮರಾವನ್ನು ಸಹ ಹಾನಿಗೊಳಿಸಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿತ್ತು. ಮೂಲಗಳ ಮಾಹಿತಿ ಪ್ರಕಾರ, ಈ ಕಳ್ಳತನ ಪ್ರಕರಣದ ಮೂವರು ಆರೋಪಿಗಳನ್ನು ಛತ್ತೀಸ್​ಗಢದಲ್ಲಿ ಬಂಧಿಸಲಾಗಿದೆ. ಪೊಲೀಸರು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪೊಲೀಸರು ನೀಡುವ ಅಧಿಕೃತ ಹೇಳಿಕೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.

ಇದನ್ನೂ ಓದಿ :ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!

ABOUT THE AUTHOR

...view details