ಕರ್ನಾಟಕ

karnataka

ETV Bharat / bharat

Janasena and TDP alliance: ಆಂಧ್ರ ಪ್ರದೇಶದ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ.. ಪವನ್ ಕಲ್ಯಾಣ್ ಘೋಷಣೆ - ಚಂದ್ರಬಾಬು ನಾಯ್ಡು ಬಂಧನ

ಆಂಧ್ರ ಪ್ರದೇಶದ ಚುನಾವಣೆಯಲ್ಲಿ ಜನಸೇನಾ ಮತ್ತು ತೆಲುಗು ದೇಶಂ ಪಕ್ಷದ ಮೈತ್ರಿ ಬಗ್ಗೆ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

Janasena and Telugudesam
ಪವನ್ ಕಲ್ಯಾಣ್

By ETV Bharat Karnataka Team

Published : Sep 14, 2023, 1:45 PM IST

Updated : Sep 14, 2023, 2:19 PM IST

ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ವಿರುದ್ಧ ಸಮರ ಸಾರಿರುವ ಟಾಲಿವುಡ್​ ಪವರ್​ ಸ್ಟಾರ್​, ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಇಂದು ಮಹತ್ವದ ಘೋಷಣೆ ಮಾಡಿದ್ದಾರೆ. ಮುಂಬರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಒಟ್ಟಿಗೆ ಸ್ಪರ್ಧೆ ಮಾಡಲಿವೆ ಎಂದು ಪವನ್ ಕಲ್ಯಾಣ್ ಪ್ರಕಟಿಸಿದ್ದಾರೆ. ರಾಜ್ಯದಲ್ಲಿನ ಅರಾಜಕತೆಯನ್ನು ಕೊನೆಗಾಣಿಸಲು ಐಕ್ಯರಂಗದ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನಕ್ಕೆ ಒಳಗಾಗಿದ್ದಾರೆ. ರಾಜಮಹೇಂದ್ರವರಂ ಜೈಲಿನಲ್ಲಿರುವ ಚಂದ್ರಬಾಬು ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಪವರ್​ ಸ್ಟಾರ್, ಜನಸೇನಾ ಹಾಗೂ ಟಿಡಿಪಿ ಮೈತ್ರಿ ಬಗ್ಗೆ ಘೋಷಿಸಿದರು. ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಆಡಳಿತ ಉತ್ತಮವಾಗಿದ್ದರೆ ನಾನು, ಬಾಲಕೃಷ್ಣ, ಲೋಕೇಶ್ ರಾಜಕೀಯವಾಗಿ ಭೇಟಿಯಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಚಂದ್ರಬಾಬು ಬಂಧನವು ರಾಜಕೀಯ ಸೇಡಿನ ಹೊರತು ಬೇರೇನೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಭೇಟಿಯು ರಾಜಕೀಯವಾಗಿ ಬಹಳ ಮುಖ್ಯ. ಚಂದ್ರಬಾಬು ಅವರನ್ನು ಅಕ್ರಮ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಇದು ಬೇಸರವನ್ನುಂಟು ಮಾಡಿದೆ. ನಮ್ಮ ನೀತಿ ಹಾಗೂ ನಿರ್ಧಾರಗಳಲ್ಲಿ ಇಬ್ಬರ ಅಭಿಪ್ರಾಯಗಳು ಭಿನ್ನವಾಗಿರಬಹುದು. ಆದರೆ, ತೆಲುಗು ದೇಶಂ ಪಕ್ಷ, ಜನಸೇನಾ ಹೋರಾಟಕ್ಕೆ ಬಿಜೆಪಿ ಕೂಡ ಕೈಜೋಡಿಸಲಿದೆ ಎಂಬ ವಿಶ್ವಾಸ ಇದೆ. ಯಾರೇ ಬರಲಿ ಅಥವಾ ಬರದಿರಲಿ ಮುಂದಿನ ಚುನಾವಣೆಯಲ್ಲಿ ತೆಲುಗು ದೇಶಂ ಹಾಗೂ ಜನಸೇನಾ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಪ್ರಕರಣ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಅರ್ಜಿ: ವಿಚಾರಣೆ ಮುಂದೂಡಿದ ಹೈಕೋರ್ಟ್​

371 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಶನಿವಾರ ಬೆಳಗ್ಗೆ ಕೌಶಲ್ಯ ಅಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ನಂದ್ಯಾಲದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸದ್ಯ ಚಂದ್ರಬಾಬು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಂದ್ರಬಾಬು ಬಂಧನವನ್ನು ಜನಸೇನಾ ನಾಯಕ ಪವನ್ ಕಲ್ಯಾಣ್ ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೇ, ಭಾನುವಾರ ಚಂದ್ರಬಾಬು ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಪವನ್ ಕಲ್ಯಾಣ್ ಅವರನ್ನೂ ಪೊಲೀಸರು ರಸ್ತೆ ಮಧ್ಯೆಯಲ್ಲೇ ತಡೆದು ವಶಕ್ಕೆ ಪಡೆದಿದ್ದರು.

ಮತ್ತೊಂದೆಡೆ, ಬಿಜೆಪಿಯ ಆಂಧ್ರ ಪ್ರದೇಶ ಘಟಕದ ಮುಖ್ಯಸ್ಥೆ ದಗ್ಗುಬಾಟಿ ಪುರಂದೇಶ್ವರಿ ಕೂಡ ಆಂಧ್ರ ಪ್ರದೇಶದ ಪೊಲೀಸರ ವಿರುದ್ಧ ಧ್ವನಿ ಎತ್ತಿದ್ದಾರೆ. ಟಿಡಿಪಿ ಮುಖ್ಯಸ್ಥರ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿರುವ ಅವರು, ''ಸರಿಯಾದ ಸೂಚನೆ ನೀಡದೆ ಮತ್ತು ಎಫ್‌ಐಆರ್‌ನಲ್ಲಿ ಹೆಸರನ್ನೂ ಉಲ್ಲೇಖಿಸದೆ ನಾಯ್ಡು ಅವರನ್ನು ಬಂಧಿಸಿರುವುದು ಸೂಕ್ತವಲ್ಲ'' ಎಂದು ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ (ಟ್ವಿಟ್ಟರ್​) ಪೋಸ್ಟ್​ ಮಾಡಿದ್ದಾರೆ.

Last Updated : Sep 14, 2023, 2:19 PM IST

ABOUT THE AUTHOR

...view details