ಕರ್ನಾಟಕ

karnataka

ETV Bharat / bharat

ಭಾರತದ ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ ಇರಾನಿ ನಿಧನ - ಭಾರತದ ಉಕ್ಕಿನ ಮನುಷ್ಯ

ಟಾಟಾ ಸ್ಟೀಲ್​ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದ ಜಮ್ಶೆಡ್ ಜೆ ಇರಾನಿ​ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು.

Jamshed J Irani passes away
ಜಮ್ಶೆಡ್ ಜೆ ಇರಾನಿ ನಿಧನ

By

Published : Nov 1, 2022, 9:04 AM IST

Updated : Nov 1, 2022, 12:38 PM IST

ನವದೆಹಲಿ:ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಹಾಗೂ ಇರಾನಿ ಟಾಟಾ ಸ್ಟೀಲ್​ ಸಂಸ್ಥೆಯ ನಿವೃತ್ತ ಮ್ಯಾನೇಜಿಂಗ್​ ಡೈರೆಕ್ಟರ್​ ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ.

ಇರಾನಿಯವರು 2011ರಲ್ಲಿ ಟಾಟಾ ಸ್ಟೀಲ್​ ಮಂಡಳಿಯ ಮ್ಯಾನೇಜಿಂಗ್​ ಡೈರೆಕ್ಟರ್​ ಹುದ್ದೆಯಿಂದ ನಿವೃತ್ತರಾಗಿದ್ದರು. ಟಾಟಾ ಸ್ಟೀಲ್​ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಜಮ್ಶೆಡ್​ ಇರಾನಿ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು. 1936ರಲ್ಲಿ ಜೂನ್​ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಇವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಡೈಸಿ ಇರಾನಿ ಮತ್ತು ಮೂವರು ಮಕ್ಕಳಾದ ಜುಬಿನ್, ನಿಲೋಫರ್ ಮತ್ತು ತನಾಜ್ ಅವರನ್ನು ಅಗಲಿದ್ದಾರೆ.

1956 ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದ್ದ ಡಾ ಇರಾನಿ 1958 ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದರು. ಅದಾದ ನಂತರ ಜೆಎನ್ ಟಾಟಾ ವಿದ್ವಾಂಸರಾಗಿ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ಹೋದವರು ಅಲ್ಲಿ 1960 ರಲ್ಲಿ ಮೆಟಲರ್ಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಷ್ಟೇ ಅಲ್ಲದೆ 1963 ರಲ್ಲಿ ಲೋಹಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದರು.

ಶೈಕ್ಷಣಿಕ ಜೀವನವನ್ನು ದಾಟಿದ ಜಮ್ಶೆಡ್ ಜೆ ಇರಾನಿ 1963 ರಲ್ಲಿ ಶೆಫೀಲ್ಡ್‌ನಲ್ಲಿ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್​ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಆದರೆ ತಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹಂಬಲಿಸುತ್ತಿದ್ದ ಇರಾನಿ 1968ರಲ್ಲಿ ಭಾರತಕ್ಕೆ ಹಿಂದಿರುಗುತ್ತಾರೆ. ಭಾರತಕ್ಕೆ ಬಂದವರೇ ಟಾಟಾ ಐರನ್​ ಆ್ಯಂಡ್​ ಸ್ಟೀಲ್​ ಕಂಪನಿಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ಸೇರಿಕೊಳ್ಳುತ್ತಾರೆ.

ಸಹಾಯಕರಾಗಿ ಟಾಟಾ ಕಂಪನಿಯನ್ನು ಸೇರಿಕೊಂಡು ತಮ್ಮ ಕಾರ್ಯವೈಖರಿಯಿಂದಲೇ 1978 ರಲ್ಲಿ ಜನರಲ್ ಸೂಪರಿಂಟೆಂಡೆಂಟ್, 1979 ರಲ್ಲಿ ಜನರಲ್ ಮ್ಯಾನೇಜರ್ ಮತ್ತು 1985 ರಲ್ಲಿ ಟಾಟಾ ಸ್ಟೀಲ್ ಅಧ್ಯಕ್ಷರಾಗಿ ಬಡ್ತಿ ಪಡೆಯುತ್ತಲೇ ಹೋಗಿದ್ದರು. 1988ರಲ್ಲಿ ಟಾಟಾ ಸ್ಟೀಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಅವರು 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಹುದ್ದೆ ಅಲಂಕರಿಸಿದ್ದರು. 2001 ರಲ್ಲಿ ನಿವೃತ್ತರಾಗುವ ಹೊತ್ತಿಗೆ ಕಂಪನಿಯಲ್ಲಿ ಉನ್ನತ ಸ್ಥಾನಕ್ಕೆ ತಲುಪಿದ್ದರು.

1981ರಲ್ಲಿ ಟಾಟಾ ಸ್ಟೀಲ್ ಮಂಡಳಿ ಸೇರ್ಪಡೆಯಾದ ಇರಾನಿ 2001 ರಿಂದ ಒಂದು ದಶಕದವರೆಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಮಾತ್ರವಲ್ಲದೆ ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಟಾಟಾ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಬರುವಲ್ಲಿ ಶ್ರಮಿಸಿರುವುದು ಮಾತ್ರವಲ್ಲದೆ 1992-93ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (CII) ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯನ್ನೂ ಅಲಂಕರಿಸಿದ್ದರು. 1996 ರಲ್ಲಿ ರಾಯಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್‌ನ ಅಂತಾರಾಷ್ಟ್ರೀಯ ಸದಸ್ಯರಾಗಿ ನೇಮಕಗೊಂಡಿದ್ದರು.

ಇಂಡೋ-ಬ್ರಿಟಿಷ್ ವ್ಯಾಪಾರ ಮತ್ತು ಸಹಕಾರಕ್ಕೆ ನೀಡಿದ ಕೊಡುಗೆಗಳಿಗಾಗಿ 1997 ರಲ್ಲಿ ರಾಣಿ ಎಲಿಜಬೆತ್ II ಅವರಿಂದ ಗೌರವ ನೈಟ್‌ಹುಡ್ ಪಡೆದ ಉಕ್ಕಿನ ಮನುಷ್ಯ ಡಾ ಇರಾನಿ. ಕೈಗಾರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2007ರಲ್ಲಿ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಿತ್ತು. ಡಾ ಇರಾನಿ ಅವರು ಲೋಹಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಸೇವೆಗಳನ್ನು ಗುರುತಿಸಿ 2008ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿತ್ತು.

1990 ರ ದಶಕದ ಆರಂಭದಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಟಾಟಾ ಸ್ಟೀಲ್ ಕಂಪನಿಯನ್ನು ಮುಂಚೂಣಿಗೆ ಕೊಂಡೊಯ್ದ ಮತ್ತು ಭಾರತದಲ್ಲಿ ಉಕ್ಕು ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ದೂರದೃಷ್ಟಿಯ ನಾಯಕರಾಗಿ ಅವರನ್ನು ಪ್ರೀತಿಯಿಂದ ಸ್ಮರಿಸಲಾಗುವುದು ಎಂದು ಟಾಟಾ ಸ್ಟೀಲ್ ಹೇಳಿದೆ.

ಇದನ್ನೂ ಓದಿ:ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ನಿಧನ

Last Updated : Nov 1, 2022, 12:38 PM IST

ABOUT THE AUTHOR

...view details