ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ದೇಶದಲ್ಲಿ ನ್ಯಾಯದಾನ ವಿಳಂಬವಾಗುತ್ತಿದೆ ಎಂಬ ಆರೋಪದ ಮಧ್ಯೆಯೇ ಇದಕ್ಕೆ ಇಂಬು ನೀಡುವಂತೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೊಲೀಸ್ ಅಧಿಕಾರಿಯೊಬ್ಬರ ನಿವೃತ್ತಿಯ ಬಳಿಕ ಕರ್ತವ್ಯಲೋಪ ಪ್ರಕರಣದಲ್ಲಿ ಆತನಿಗೆ "ಹಿಂಬಡ್ತಿ" ನೀಡಿದ ವಿದ್ಯಮಾನ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯ ಮೇಲೆ ಕೈಗೊಳ್ಳಲಾದ ಕ್ರಮದ ಆದೇಶ ಹೊರಡಿಸಿದೆ.
ಸರೋವರ ಸಂರಕ್ಷಣೆ ಮತ್ತು ನಿರ್ವಹಣಾ ಪ್ರಾಧಿಕಾರದ (ಎಲ್‌ಸಿಎಂಎ) ಡಿವೈಎಸ್ಪಿ ಆಗಿದ್ದ ಅಧಿಕಾರಿಯನ್ನು ಈಗ ಇನ್ಸ್ಪೆಕ್ಟರ್ ಆಗಿ ಹಿಂಬಡ್ತಿ ನೀಡಲಾಗಿದೆ. ಅವರ ಅಧಿಕಾರವಧಿಯಲ್ಲಿ ಕಟ್ಟಡ ಯೋಜನೆಯ ನಿಯಮಗಳು ಉಲ್ಲಂಘನೆಯಾಗಿವೆ ಎಂದು ಅವರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯಿಂದ ತಿಳಿದು ಬಂದಿದೆ. ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರವನ್ನು ಈಗ ಲೇಕ್ ಕನ್ಸರ್ವೇಶನ್ ಅಂಡ್ ಮ್ಯಾನೇಜ್ಮೆಂಟ್ ಅಥಾರಿಟಿ (LCMA) ಎಂದು ಮರುನಾಮಕರಣ ಮಾಡಲಾಗಿದೆ.
ಗೃಹ ಇಲಾಖೆಯು ನಿವೃತ್ತ ಪ್ರಭಾರಿ ಡಿವೈಎಸ್ಪಿ ಆಗಿದ್ದ ಶಾ ಸಿಕಂದರ್ ಅವರನ್ನು ಬಡ್ತಿ ನೇಮಕಾತಿ ದಿನದಿಂದ ಜಾರಿಯಾಗುವಂತೆ ಹಿಂಬಡ್ತಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಆದೇಶಿಸಿದೆ. ಅಂದಿನ ಸರೋವರ ಮತ್ತು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದ ಸಿಕಂದರ್ ಅವರ ಮೇಲೆ ದಾಲ್ ಸರೋವರದ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಆರೋಪವಿತ್ತು. ಅದರಂತೆ ಅವರ ವಿರುದ್ಧ 2015 ರಲ್ಲಿ ಕರ್ತವ್ಯ ಲೋಕ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆ ನಡೆಸಿದ ಪೊಲೀಸ್ ಇಲಾಖೆ ಮಾರ್ಚ್ 14, 2017 ರಂದು ಅಧಿಕಾರಿ ಸಿಕಂದರ್ ಅವರನ್ನು ಬಂಧಿಸಿತ್ತು. 21 ದಿನಗಳ ನ್ಯಾಯಾಂಗ ಬಂಧನದ ವೇಳೆ ಲಿಖಿತ ಹೇಳಿಕೆ ಪಡೆದು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ವಿಚಾರಣೆಯ ವೇಳೆ ಎಲ್ಲ ಆರೋಪಗಳನ್ನು ಅವರು ನಿರಾಕರಿಸಿದ್ದರು.