ಕತ್ರಾ (ಜಮ್ಮು ಮತ್ತು ಕಾಶ್ಮೀರ): ಬುಧವಾರ ನಸುಕಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಕತ್ರಾ ಪಟ್ಟಣದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3 ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ 2.20ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ (Jammu and Kashmir Earthquake) ಸುಮಾರು 81 ಕಿಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಈ ಭೂಕಂಪನವೂ ನಡು ರಾತ್ರಿ ಸುಮಾರು 2.20ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಟ್ವೀಟ್‌ನಲ್ಲಿ ತಿಳಿಸಿದೆ.
ಮಂಗಳವಾರ, ಜೂನ್ 13 ರ ಮಧ್ಯಾಹ್ನ 1.30ರ ಸುಮಾರು ಜಮ್ಮು-ಕಾಶ್ಮೀರದಲ್ಲಿ ಭೂಕಂಪನ ಸಂಭವಿಸಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.4 ದಾಖಲಾಗಿತ್ತು. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರ ಹೊರತು ಪಡಿಸಿ ಉತ್ತರ ಭಾರತದ ಕೆಲ ಭಾಗಗಳಲ್ಲಿಯೂ ಭೂಕಂಪನದ ಅನುಭವ ಆಗಿತ್ತು.
ದೆಹಲಿ - ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಭೂಮಿ ಕಂಪಿಸಿತು. ಮಧ್ಯಾಹ್ನ 1.33ಕ್ಕೆ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದರು. ಭೂಕಂಪದ ಕೇಂದ್ರಬಿಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋ ಭಲೆಸ್ಸಾ ಎಂಬ ದೂರದ ಹಳ್ಳಿಯ ಬಳಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಆದರೆ, ಅನೇಕ ಜನರು ಕಂಪನವನ್ನು ಅನುಭವಿಸಿರುವುದರ (Earthquake tremors felt) ಬಗ್ಗೆ ಹೇಳಿಕೊಂಡಿದ್ದರು. ಶ್ರೀನಗರದ ಸ್ಥಳೀಯರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, "ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದರು. ಅಂಗಡಿಗಳಲ್ಲಿದ್ದ ಜನರು ಹೊರಗೆ ಧಾವಿಸಿದ್ದರು ಎಂದಿದ್ದರು.