ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರನ್ನು ದಮನಿಸಲು ಆರಂಭಿಸಿರುವ ಬುಲ್ಡೋಜರ್ ರಾಜಕಾರಣದ ವಿರುದ್ಧ ಜಮೀಯತ್ ಉಲೇಮಾ-ಎ-ಹಿಂದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇಂದಿನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಮೌಲಾನಾ ಅರ್ಷದ್ ಮದನಿ, ಅಲ್ಪಸಂಖ್ಯಾತರು ಮಾತ್ರವಲ್ಲದೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವಂತೆ, ಭಾರತೀಯ ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆಯಾದ ಜಮಿಯತ್ ಉಲೇಮಾ-ಇ-ಹಿಂದ್, ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ತಡೆಯಲು ಮೌಲಾನಾ ಅರ್ಷದ್ ಮದನಿ ಅವರ ವಿಶೇಷ ನಿರ್ದೇಶನದ ಮೇರೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ರಾಜಕಾರಣ ನಡೆಯುತ್ತಿದೆ. ಇದೀಗ ಗುಜರಾತ್, ಮಧ್ಯಪ್ರದೇಶದಲ್ಲೂ ಈ ಸರಣಿ ಶುರುವಾಗಿದ್ದು, ಗಲಭೆಗಳ ನಂತರ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಏಕಪಕ್ಷೀಯ ಕ್ರಮದಲ್ಲಿ ಮುಸ್ಲಿಮರ 16 ಮನೆಗಳು ಮತ್ತು 29 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಗಳನ್ನೂ ಕೂಡ ಕೆಡವಲಾಗಿದೆ. ಈಗಾಗಲೇ ಜೈಲುಗಳಲ್ಲಿರುವ ಸದಸ್ಯರ ಮನೆಗಳನ್ನು ಸಹ ನೆಲಸಮ ಮಾಡಲಾಗಿದೆ. ಆದರೆ ಮಧ್ಯಪ್ರದೇಶ ಸರ್ಕಾರ ಮಾತ್ರ ತನ್ನ ಕ್ರೂರ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ದ್ವೇಷ ಮತ್ತು ಮತೀಯವಾದದ ಅನಾಗರಿಕ ವರ್ತನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೌಲಾನಾ ಅರ್ಷದ್ ಮದನಿ, ದೇಶಾದ್ಯಂತ ಧಾರ್ಮಿಕ ಉಗ್ರವಾದ ಮತ್ತು ದ್ವೇಷದ ಕರಾಳ ಗಾಳಿ ಬೀಸುತ್ತಿದ್ದು, ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರಲ್ಲಿ ಭಯ ಸೃಷ್ಟಿಸಿದೆ. ಮುಸ್ಲಿಂ ಪ್ರದೇಶಗಳಲ್ಲಿ ಮತ್ತು ಮಸೀದಿಗಳ ಮುಂದೆ ಪ್ರಚೋದನಾ ಕೆಲಸಗಳು ನಡೆಯುತ್ತಿವೆ.
ಪೊಲೀಸರ ಎದುರೇ ಲಾಠಿ, ಕತ್ತಿ ಬೀಸುತ್ತಿದ್ದಾರೆ. ಇವುಗಳ ವಿರುದ್ಧ ಮಾತನಾಡಡುವವರಿಲ್ಲ. ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದಾರೆ. ಅವರನ್ನು ಬಂಧಿಸುವಂತಹ ಯಾವುದೇ ಕಾನೂನು ಮತ್ತು ಸರ್ಕಾರ ದೇಶದಲ್ಲಿ ಇಲ್ಲವೆಂದೆನಿಸುತ್ತದೆ. ಮತೀಯವಾದಿಗಳಿಂದ ಮುಸಲ್ಮಾನರ ಜೀವಕ್ಕೆ ಅಪಾಯವಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಮೌನವಾಗಿದೆ ಎಂದು ಮೌಲಾನಾ ಅರ್ಷದ್ ಆರೋಪಿಸಿದ್ದಾರೆ.