ಜಲೌನ್ (ಉತ್ತರಪ್ರದೇಶ) :ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ವಾಸವಿದ್ದ ಉತ್ತರಪ್ರದೇಶ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಮೃತರನ್ನು ಉತ್ತರ ಪ್ರದೇಶದ ಒರೈ ನಿವಾಸಿ ತೇಜ್ ಪ್ರತಾಪ್ ಸಿಂಗ್ (45) ಪತ್ನಿ ಸೋನಾಲ್ (40) ಹಾಗೂ 10 ಮತ್ತು 7 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ತೇಜ್ ಪ್ರತಾಪ್ ಸಿಂಗ್ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, 2009ರಲ್ಲಿ ಕಾನ್ಪುರ ಐಐಟಿಯಲ್ಲಿ ಬಿ.ಟೆಕ್ ನಲ್ಲಿ ವ್ಯಾಸಂಗ ಮಾಡಿ, ಆ ಬಳಿಕ ಅವರು ಅಮೆರಿಕದ ಮೈಲೆಪ್ಸ್ ಕಂಪನಿಗೆ ಆಯ್ಕೆಯಾಗಿದ್ದರು. ಇಲ್ಲಿಗೆ ಆಯ್ಕೆ ಆದ ನಂತರ 2009 ರಿಂದ ಅವರು ಅಮೆರಿಕದ ನ್ಯೂಜೆರ್ಸಿಯ ಪ್ಲೇನ್ಸ್‌ಬೊರೊದಲ್ಲಿ ವಾಸಿಸುತ್ತಿದ್ದರು. ಅಲ್ಲದೇ, 2019 ರಲ್ಲಿ ನ್ಯೂಜೆರ್ಸಿ ನಗರದಲ್ಲೇ ಸ್ವಂತ ಮನೆಯೊಂದನ್ನು ಖರೀದಿಸಿದ್ದರು. ತಾವು ವಾಸವಿದ್ದ ಮನೆಯಲ್ಲೇ ಬುಧವಾರ ರಾತ್ರಿ ನಾಲ್ವರೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಲ್ಲಿನ ಪೊಲೀಸರು ಮತ್ತು ಡಿಟೆಕ್ಟಿವ್ ಏಜೆನ್ಸಿಯವರು ಇಡೀ ಮನೆ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಘಟನೆಯನ್ನು ಭಾರತೀಯ ರಾಯಭಾರ ಕಚೇರಿ ದೃಢಪಡಿಸಲಾಗಿದ್ದು, ಮೃತದ ಕುಟುಂಬಸ್ಥರು ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಜಲೌನ್ ಡಿಎಂ ರಾಜೇಶ್ ಪಾಂಡೆ ಮತ್ತು ಎಸ್ಪಿ ಡಾ.ಇರಾಜ್ ರಾಜಾ ಮೃತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನು ಓದಿ:ರೈಲಿನಲ್ಲಿ ವೃದ್ಧ ವಿಜ್ಞಾನಿ ದಂಪತಿಯ ಮೇಲೆ ಮೂತ್ರ ವಿಸರ್ಜನೆ; ವ್ಯಕ್ತಿ ಬಂಧನ
ಮೂರು ಮಕ್ಕಳೊಂದಿಗೆ ತಂದೆ ಅನುಮಾನಾಸ್ಪದ ಸಾವು : ಮತ್ತೊಂದು ಇಂತಹ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಒಂದೇ ಕುಟುಂಬದ ಮೂವರು ಪುಟ್ಟ ಮಕ್ಕಳ ಹಾಗೂ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೆ.2 ರಂದು ನಡೆದಿತ್ತು. ಮೃತ ವ್ಯಕ್ತಿಯ ಪತ್ನಿ ನಾಪತ್ತೆಯಾಗಿರುವುದರಿಂದ ಈ ಘಟನೆ ಹಿಂದೆ ಈಕೆಯ ಕೈವಾಡ ಇರುವ ಸಂಶಯ ವ್ಯಕ್ತವಾಗಿತ್ತು. ಮೃತರನ್ನು 38 ವರ್ಷದ ಜಿತನ್ ಹಾಗೂ ಈತನ ಮಕ್ಕಳಾದ 12 ಹಾಗೂ 8 ವರ್ಷದ ಪುತ್ರರು ಮತ್ತು 10 ವರ್ಷದ ಪುತ್ರಿ ಎಂದು ಗುರುತಿಸಲಾಗಿತ್ತು. ಡಿಎಸ್ಪಿ ಜಿತೇಂದ್ರ ಕುಮಾರ್ ರಾಣಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು.