ಜಕಾರ್ತಾ (ಇಂಡೋನೇಷ್ಯಾ) :ಜಕಾರ್ತಾದಲ್ಲಿ ನಡೆಯುವ 20 ನೇ ಆಸಿಯಾನ್ - ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಿಂದ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಲ್ಲಿಗೆ ತೆರಳಲಿದ್ದಾರೆ. ಸಭೆ ಮುಗಿದ ಬಳಿಕ ನಾಳೆಯೇ ಅವರು ಭಾರತಕ್ಕೆ ವಾಪಸ್ ಬರಲಿದ್ದಾರೆ.
ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಮುಂಚಿತವಾಗಿ ಇಂಡೋನೇಷ್ಯಾದಲ್ಲಿ ಆಸಿಯಾನ್- ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಗಳೆರಡೂ ಸೆಪ್ಟೆಂಬರ್ 7 ರಂದು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಅಂದೇ ವಾಪಸ್ ಬರಲು ಅನುಕೂಲವಾಗುವಂತೆ ಆಸಿಯಾನ್‌ನ ಪ್ರಸ್ತುತ ಅಧ್ಯಕ್ಷತೆ ವಹಿಸಿರುವ ಇಂಡೋನೇಷ್ಯಾ ಎರಡೂ ಶೃಂಗಸಭೆಗಳ ವೇಳಾಪಟ್ಟಿ ಹೊಂದಿಸಿದೆ.
ಸಹಕಾರ ಸಂಬಂಧಗಳ ವೃದ್ಧಿ:ಈ ಶೃಂಗಸಭೆಯು ಭಾರತ-ಆಸಿಯಾನ್ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸುತ್ತದೆ. ರಾಷ್ಟ್ರಗಳ ನಡುವಿನ ಭವಿಷ್ಯದ ಸಹಕಾರ ಸಂಬಂಧವನ್ನು ವೃದ್ಧಿಪಡಿಸಲಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿದೆ. ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಸಭೆಯು ಆಸಿಯಾನ್ ಮ್ಯಾಟರ್ಸ್: ಎಪಿಸೆಂಟ್ರಮ್ ಆಫ್ ಗ್ರೋತ್ ಎಂಬ ವಿಷಯದ ಮೇಲೆ ನಡೆಯಲಿದೆ.