ನವದೆಹಲಿ:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ 39 ವರ್ಷದ ಜೈವೀರ್ ಶೆರ್ಗಿಲ್ ರಾಜೀನಾಮೆ ನೀಡಿದ್ದಾರೆ. ಗಾಂಧಿ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಅವರು, ದೇಶದ ಹಿತಾಸಕ್ತಿಯ ದೃಷ್ಟಿಕೋನದಿಂದ ಪಕ್ಷ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಶೆರ್ಗಿಲ್, ಪಕ್ಷ ತೆಗೆದುಕೊಳ್ಳುತ್ತಿರುವ ನಿರ್ಣಯಗಳು, ತಳೆದಿರುವ ಸಿದ್ಧಾಂತ ಈಗಿನ ಯುವ ಕಾರ್ಯಕರ್ತರು ಹಾಗೂ ಆಧುನಿಕ ಭಾರತದ ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ, ಮೂವರೂ ಗಾಂಧಿಗಳು ಕಳೆದ ಒಂದು ವರ್ಷದಿಂದ ನಮ್ಮನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಪಕ್ಷದೊಂದಿಗಿನ ಎಲ್ಲ ಸಂಬಂಧವನ್ನೂ ಕಡಿದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನಿರ್ಧಾರಗಳಿಗೂ ವಾಸ್ತವಕ್ಕೂ ಹೊಂದಾಣಿಕೆಯೇ ಇಲ್ಲ. ಕಳೆದ ಒಂದು ವರ್ಷದಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ಸಮಯ ಕೇಳುತ್ತಿದ್ದೇನೆ. ಆದರೆ, ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ದೇಶದ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ತುಂಬ ನೋವುಂಟು ಮಾಡಿದೆ. ಇದರ ಬದಲು ವೈಯಕ್ತಿಕ ಹಿತಾಸಕ್ತಿಯ ಮನಸ್ಥಿತಿಯ ಕೆಲಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಕೆಲಸ ಮಾಡಲು, ಅದರೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.