ನವದೆಹಲಿ :ಇಸ್ರೇಲ್ಗಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ 8 ಮಂದಿ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಕುಟುಂಬವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಬೆಳಗ್ಗೆ ಭೇಟಿ ಮಾಡಿದರು. ಈ ವೇಳೆ, ಕತಾರ್ನಲ್ಲಿ ಬಂಧನಕ್ಕೊಳಗಾಗಿರುವ ಅಧಿಕಾರಿಗಳನ್ನು ಕರೆತರುವ ನಿಟ್ಟಿನಲ್ಲಿ ಸರ್ಕಾರವು ಸರ್ವಪ್ರಯತ್ನ ನಡೆಸಲಿದೆ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಕತಾರ್ನಲ್ಲಿ ಬಂಧನಕ್ಕೊಳಗಾಗಿರುವ ಎಂಟು ಭಾರತೀಯರ ಕುಟುಂಬಸ್ಥರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿದೆ. ಭಾರತ ಸರ್ಕಾರವು ಶಿಕ್ಷೆಗೊಳಗಾಗಿರುವ 8 ಜನರನ್ನು ಕರೆತರುವಲ್ಲಿ ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸುತ್ತದೆ. ಕುಟುಂಬಸ್ಥರನ್ನು ಭೇಟಿ ಮಾಡಿ ಅವರ ನೋವನ್ನು ಆಲಿಸಲಾಯಿತು. ಈ ಎಲ್ಲ ಕುಟುಂಬಸ್ಥರ ಜೊತೆ ಸರ್ಕಾರ ಇರಲಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ಗಾಗಿ ಬೇಹುಗಾರಿಕೆ.. 8 ಮಂದಿಗೆ ಮರಣದಂಡನೆ :ಕಳೆದ ಅಕ್ಟೋಬರ್ 26ರಂದು ಇಸ್ರೇಲ್ಗಾಗಿ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಎಂಟು ಮಂದಿ ಮಾಜಿ ಭಾರತೀಯ ಸೇನಾಪಡೆಯ ಅಧಿಕಾರಿಗಳಿಗೆ ಕತಾರ್ನಲ್ಲಿ ಮರಣ ದಂಡನೆ ಶಿಕ್ಷೆಯಾಗಿತ್ತು. ಶಿಕ್ಷೆಗೊಳಗಾದವರನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿತ್ತು.