ಜೈಪುರ (ರಾಜಸ್ಥಾನ): ವೇಶ್ಯಾವಾಟಿಕೆ ದಂಧೆಯಿಂದ ಬಾಲಕಿಯೊಬ್ಬರನ್ನು ರಾಜಸ್ಥಾನದ ಜೈಪುರ ಪೊಲೀಸರು ರಕ್ಷಣೆ ಮಾಡಿ, ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಮಾನವ ಕಳ್ಳಸಾಗಣೆ ನಿಗ್ರಹ ದಳದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುನೀತಾ ಜಾತವ್ ಹಾಗೂ ಮಹೇಂದ್ರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಮೊದಲಿಗೆ ಪೊಲೀಸ್ ತಂಡದ ಕೆಲ ಸದಸ್ಯರು ಗ್ರಾಹಕರ ಸೋಗಿನಲ್ಲಿದ್ದ ಸುನೀತಾರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರನ್ನು ಗ್ರಾಹಕರೆಂದೇ ತಿಳಿದ ಸುನೀತಾ ದಂಧೆಯ ವಿಷಯ ಬಹಿರಂಗ ಪಡಿಸಿದ್ದಾರೆ.
ಅಂತೆಯೇ, ಸುನೀತಾರನ್ನು ಬಂಧಿಸಿ, ಈ ದಂಧೆಯಲ್ಲಿ ತೊಡಗಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ದಂಧೆಯ ಮಾಸ್ಟರ್ ಮೈಂಡ್ ಸುನೀತಾ ಆಗಿದ್ದು, ಸಂತ್ರಸ್ತ ಬಾಲಕಿಯ ಹೇಳಿಕೆಯ ಮೇರೆಗೆ ನಾಲ್ವರು ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಜೈಪುರ ಪೂರ್ವ ವಿಭಾಗದ ಡಿಸಿಪಿ ಡಾ.ರಾಜೀವ್ ಪಚಾರ್ ತಿಳಿಸಿದ್ದಾರೆ.
ಅಲ್ಲದೇ, ಮೂರು ತಿಂಗಳ ಹಿಂದೆ ಸಂತ್ರಸ್ತ ಬಾಲಕಿಗೆ ಮಾದಕ ವಸ್ತು ನೀಡಿ ಕೋಟಾದಿಂದ ಜೈಪುರಕ್ಕೆ ಕರೆತರಲಾಗಿತ್ತು. ನಂತರ ಅವರನ್ನು ಈ ದಂಧೆಗೆ ತಳ್ಳಲಾಗಿತ್ತು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಧನರಾಜ್ ಮೀನಾ, ಹೆಡ್ ಕಾನ್‌ಸ್ಟೇಬಲ್ ರಮೇಶ್ ಮೀನಾ ಮತ್ತು ಕಾನ್‌ಸ್ಟೇಬಲ್ ವಂದನಾ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಇದನ್ನೂ ಓದಿ:ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಪ್ರಕರಣ.. ಇಬ್ಬರು ಕಾಮುಕರಿಗೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ