ಜೈಪುರ (ರಾಜಸ್ಥಾನ):ದುಷ್ಕರ್ಮಿಗಳುಯುವಕನೊಬ್ಬನನ್ನು ಅಪಹರಿಸಿ, ಕೊಲೆಮಾಡಿ ದೇಹವನ್ನು ನದಿಗೆ ಎಸೆದಿರುವ ಘಟನೆ ನಗರದ ಸಂಗನೇರ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹನುಮಂತ ಮೀನಾ ಮೃತ ಯುವಕ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:ಹನುಮಂತ ಮೀನಾ ಕೆಲಸಕ್ಕೆ ತೆರಳುವಾಗ ಇಬ್ಬರು ಆರೋಪಿಗಳು ಆತನನ್ನು ಅಪಹರಿಸಿದ್ದಾರೆ. ಬಳಿಕ ಆತನ ಪೋಷಕರಿಗೆ ವಿಡಿಯೋ ಕರೆ ಮಾಡಿ 1 ಕೋಟಿ ರೂ ಹಣ ನೀಡುವಂತೆ, ಇಲ್ಲದಿದ್ದರೆ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ತಿಳಿಸದಂತೆ ಕುಟುಂಬ ಸದಸ್ಯರಿಗೆ ಎಚ್ಚರಿಕೆ ಕೂಡಾ ನೀಡಿದ್ದಾರೆ
ಇದರಿಂದ ಗಾಬರಿಗೊಂಡ ಹನುಮಂತನ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಈ ವಿಷಯ ತಿಳಿದ ಆರೋಪಿಗಳು, ಕೋಪಗೊಂಡು ಹನುಮಂತನನ್ನು ಕೊಲೆ ಮಾಡಿ, ಶವವನನ್ನು ಗೋಣಿ ಚೀಲದಲ್ಲಿ ಕಟ್ಟಿ ದ್ರವ್ಯಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಮಹೇಂದ್ರ ಸಿಂಗ್ ಯಾದವ್ ಎಂಬುವವರು ಮಾಹಿತಿ ನೀಡಿದ್ದು, ಮೃತ ಯುವಕ ಡೈರಿಯೊಂದರಲ್ಲಿ ಕಂಪ್ಯೂಟರ್ ಆಪ್ರೇಟರ್ ಆಗಿ ಕೆಲಸ ಮಾಡುತ್ತಿದ್ದ. ಸೋಮವಾರ ಬೆಳಗ್ಗೆ ಕೆಲಸಕ್ಕೆ ಎಂದು ಕಚೇರಿಗೆ ತೆರಳಿದ್ದ ಹನುಮಂತ, ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಬಳಿಕ ಹನುಮಂತ ಮೀನಾ ಅವರ ನಂಬರ್‌ನಿಂದ ಆರೋಪಿಗಳು ಆತನ ಪೋಷಕರಿಗೆ ವಿಡಿಯೋ ಕರೆ ಮಾಡಿ ತಮ್ಮ ಮಗನನ್ನು ಅಪಹರಿಸಿರುವುದಾಗಿ ಹೇಳಿದ್ದರು.