ಜೈಪುರ (ರಾಜಸ್ಥಾನ): ಜೈನರ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವೆಂದು ಘೋಷಿಸಿರುವ ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 72 ವರ್ಷದ ಜೈನ ಸನ್ಯಾಸಿಯೊಬ್ಬರು ಜೈಪುರದಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯವರಾದ ಸುಗ್ಯೆಸಾಗರ್ ಮಹಾರಾಜ್ ಅವರು ಸರ್ಕಾರದ ನಿರ್ಧಾರದ ವಿರುದ್ಧ ಜೈಪುರದಲ್ಲಿ ನಡೆದ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ನಗರದ ಸಂಗನೇರ್ ಪ್ರದೇಶದ ಸಾಂಘಿಜಿ ದೇಗುಲದಲ್ಲಿ ಉಪವಾಸ ಕುಳಿತಿದ್ದರು. ಡಿಸೆಂಬರ್ 25 ರಿಂದ ಅಮರಣಾಂತ ವ್ರತದಲ್ಲಿದ್ದ ಇವರು ನಿನ್ನೆ ಬೆಳಗ್ಗೆ ನಿಧನರಾಗಿದ್ದು, ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿದೆ ಎಂದು ಮಾಲ್ಪುರ ಗೇಟ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸತೀಶ್ ಚಂದ್ ಮಾಹಿತಿ ನೀಡಿದರು.
ದೇಶಾದ್ಯಂತ ಜೈನ ಸಮಾಜದಿಂದ ಪ್ರತಿಭಟನೆ:ಜಾರ್ಖಂಡ್ ಸರ್ಕಾರವು ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಅಧಿಸೂಚನೆ ಹೊರಡಿಸಿದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಜೈನ ಧರ್ಮೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ನಮ್ಮ ಧರ್ಮದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಜೈನ ಧರ್ಮವು ಅಹಿಂಸೆಯನ್ನು ನಂಬುತ್ತದೆ. ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಮಾಂಸಾಹಾರಿ ಹೋಟೆಲ್, ಬಾರ್‌ಗಳು ತಲೆ ಎತ್ತಲಿವೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಕಾರಣವಾಗಲಿದೆ. ಜಾರ್ಖಂಡ್ ಸರ್ಕಾರ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿ ನವದೆಹಲಿ, ಸಹಮದಾಬಾದ್, ಕರ್ನಾಟಕ ರಾಜ್ಯದ ಬೆಂಗಳೂರು, ತುಮಕೂರು, ಮಂಗಳೂರು, ಉಡುಪಿ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ.
ಇದನ್ನೂ ಓದಿ:ಸಮ್ಮೇದ ಶಿಖರ್ಜಿ ಉಳಿಸಿ ಆಂದೋಲನ: ಜಾರ್ಖಂಡ್ ಸರ್ಕಾರದ ವಿರುದ್ಧ ಜೈನ ಸಮುದಾಯ ಪ್ರತಿಭಟನೆ