ಕರ್ನಾಟಕ

karnataka

ETV Bharat / bharat

ಪವಿತ್ರ ಕ್ಷೇತ್ರಗಳ ರಕ್ಷಣೆಗೆ ಆಗ್ರಹ: ಜೈನ ಸಮುದಾಯದಿಂದ ಬೃಹತ್​ ರ್ಯಾಲಿ - ಜೈನ ಸಮುದಾಯ

ಅಹಮದಾಬಾದ್‌ನಲ್ಲಿ ಜೈನ ಸಮುದಾಯದಿಂದ ಬೃಹತ್​ ಪ್ರತಿಭಟನೆ- ಶತ್ರುಂಜಯ್ ಮಹಾತೀರ್ಥವನ್ನು ಉಳಿಸಿಕೊಳ್ಳುವ ಸಲುವಾಗಿ ರ್ಯಾಲಿ - 20,000 ಕ್ಕೂ ಹೆಚ್ಚು ಜನರು ಭಾಗಿ, ಟ್ರಾಫಿಕ್​ ಜಾಮ್​

ಪವಿತ್ರ ಕ್ಷೇತ್ರಗಳ ರಕ್ಷಣೆಗೆ ಆಗ್ರಹ
ಪವಿತ್ರ ಕ್ಷೇತ್ರಗಳ ರಕ್ಷಣೆಗೆ ಆಗ್ರಹ

By

Published : Jan 2, 2023, 5:16 PM IST

ಅಹಮದಾಬಾದ್‌: ಜಾರ್ಖಂಡ್​ನ ಸಮ್ಮೇದ್​ ಶಿಖರ್ಜಿ ಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಾರದು. ಅಲ್ಲದೇ ಗುಜರಾತ್​ನ ಪಾಲಿಟಾನಾದಲ್ಲಿರುವ ಶತ್ರುಂಜಯ ಮಹಾತೀರ್ಥದಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಜೈನ ಸಮುದಾಯದ ಸದಸ್ಯರು ಅಹಮದಾಬಾದ್​ ನಗರದಲ್ಲಿ ಭಾನುವಾರ ರ್ಯಾಲಿ ನಡೆಸಿದರು.

ರ್ಯಾಲಿಯಲ್ಲಿ 20 ಸಾವಿರ ಜನ ಭಾಗಿ:ರ್ಯಾಲಿಯು ಅಹಮದಾಬಾದ್‌ನ ಪಾಲ್ಡಿ ಪ್ರದೇಶದಿಂದ ಪ್ರಾರಂಭವಾಗಿ, ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆ ಬಳಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯಗೊಂಡಿದೆ. ಸಮುದಾಯದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ. ಸಮುದಾಯವು ಭಾನುವಾರ ಆಯೋಜಿಸಿದ್ದ ರ್ಯಾಲಿಯಲ್ಲಿ ಸುಮಾರು 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ರ್ಯಾಲಿಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ ಹಿನ್ನೆಲೆ ಪಾಳ್ಡಿಯಿಂದ ಆರ್​ಟಿಒ ವರೆಗಿನ 3 ಕಿ ಮೀ ರಸ್ತೆಯನ್ನು ಬಂದ್ ಮಾಡಬೇಕಾಯಿತು.

ಆದಿನಾಥ ದಾದಾರ ಪಾದುಕೆಗಳಿಗೆ ಹಾನಿ: ನವೆಂಬರ್ 25, 2022 ರಂದು, ಕೆಲವು ಸಮಾಜ ವಿರೋಧಿ ಶಕ್ತಿಗಳು ಜೈನರ ಪವಿತ್ರ ಸ್ಥಳವಾದ ಶತ್ರುಂಜಯ್ ಬೆಟ್ಟದ ಬಳಿ ಇರುವ ರೋಹಿಶಾಲಾ ಗ್ರಾಮದ ಪವಿತ್ರ ದೇಗುಲದಲ್ಲಿ ಇರಿಸಲಾದ ಆದಿನಾಥ ದಾದಾ ಅವರ ಪಾದಿಕೆಗಳನ್ನು ಹಾನಿಗೊಳಿಸಿದ್ದರು. ಜೈನ ಸಮುದಾಯದ ವಿವಿಧ ಗುಂಪುಗಳು ನವೆಂಬರ್ 27, 29 ಮತ್ತು 30 ರಂದು ದೂರುಗಳನ್ನು ಸಲ್ಲಿಸಿವೆ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಸಮಸ್ತ್ ರಾಜನಗರ ಶ್ರೀ ಜೈನ ಮಹಾಸಂಘ ಅಹಮದಾಬಾದ್‌ನ ಸಮಿತಿ ಸದಸ್ಯ ಜೈನಮ್ ದೇವ್ರಾ ಹೇಳಿದರು.

ಪ್ರತಿಭಟನೆಗೆ ವಿಎಸ್​ಪಿ ಬೆಂಬಲ: ಅಲ್ಲದೇ ಜಾರ್ಖಂಡ್‌ನ ಯಾತ್ರಾ ಸ್ಥಳವಾದ ಸಮ್ಮೇದ್ ಶಿಖರ್​ನನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಪ್ರತಿಭಟಿಸಲಾಯಿತು ಎಂದು ದೇವ್ರಾ ಹೇಳಿದರು. ಬೇಡಿಕೆಗಳನ್ನು ಅಹಮದಾಬಾದ್‌ನ ನಿವಾಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಜೈನರ ಈ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್​ ಬೆಂಬಲ ಸಹ ಸಿಕ್ಕಿದೆ.

ಯಾವುದೇ ಯಾತ್ರಾ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಆ ಸಮುದಾಯದ ನಂಬಿಕೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಸೈಟ್‌ನ ಗುರುತನ್ನು ಇಟ್ಟುಕೊಂಡು ಯಾವುದೇ ಅಭಿವೃದ್ಧಿಯನ್ನು ಮಾಡಬೇಕು. ಪವಿತ್ರ ಸ್ಥಳಗಳ ಅಭಿವೃದ್ಧಿಯನ್ನು ನಿಭಾಯಿಸಲು ಪ್ರತ್ಯೇಕ ಸಚಿವಾಲಯವನ್ನು ಮಾಡಬೇಕು ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.

2023 ರ ಹೊಸ ವರ್ಷದ ಮೊದಲ ದಿನದಂದು, ಶತ್ರುಂಜಯ್ ಮಹಾತೀರ್ಥರ ರಕ್ಷಣೆಗಾಗಿ ಅಹಮದಾಬಾದ್, ಸೂರತ್, ಮುಂಬೈ, ದೆಹಲಿ ಸೇರಿದಂತೆ ದೇಶಾದ್ಯಂತ ರ್ಯಾಲಿಯನ್ನು ಆಯೋಜಿಸಲಾಗಿದೆ.

ಮೂರು ದಿನ ಕಾಲಾವಕಾಶ:ಈ ರ್ಯಾಲಿ ಸರ್ಕಾರದ ವಿರುದ್ಧ ಅಲ್ಲ. ಸರ್ಕಾರಕ್ಕೆ ನಮ್ಮ ಬೇಡಿಕೆ ಕೇಳಿಸಲಿ ಎಂದು ನಡೆಸಲಾಗುತ್ತಿದೆ. ಸರ್ಕಾರಕ್ಕೆ ಮೂರು ದಿನದ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಈ ಮೂರು ದಿನದಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೇ, ಉಗ್ರ ಹೋರಾಟ ನಡೆಸಲಾಗುವುದು. ನಮಗೆ ನಂಬಿಕೆ ಇದೆ, ಸರ್ಕಾರ ಒಳ್ಳೆ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಜೈನ ಸಮಾಜದ ಜೈನ ಚಾರ್ಯ ಮಹಾಬೋಧಿಸೂರಿ ಹೇಳಿದ್ದಾರೆ.

ಅಪಾರ ಸಂಖ್ಯೆಯಲ್ಲಿ ಜೈನ ಬಾಂಧವರು ಭಾಗಿ: ಬಾರ್ಡೋಲಿಯ ಕುಂತುನಾಥ ಜಿನಾಲಯದಿಂದ ಆರಂಭವಾದ ಬೃಹತ್ ರ‍್ಯಾಲಿಯಲ್ಲಿ ಸೂರತ್ ಮತ್ತು ತಾಪಿ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜೈನ ಬಾಂಧವರು ಪಾಲ್ಗೊಂಡಿದ್ದರು. ಗಿರಿರಾಜ ಮತ್ತು ಶತ್ರುಂಜಯ ಪರ್ವತವನ್ನು ಉಳಿಸುವಂತೆ ಜೈನರೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ರ್ಯಾಲಿಯು ಸರ್ದಾರ್ ಬಾಗ್, ಜಲರಾಮ್ ಮಂದಿರ, ಭಂಡಾರಿವಾಡ್, ಸರ್ದಾರ್ ಚೌಕ್, ಲಿಮ್ಡಾ ಚೌಕ್ ಮೂಲಕ ತಾಲೂಕಾ ಸೇವಾ ಸದನ ತಲುಪಿತು. ಬಾರ್ಡೋಲಿಯ ಪ್ರಾಂತೀಯ ಅಧಿಕಾರಿ ಸ್ಮಿತ್ ಲೋಧಾ ಅವರು ಜೈನರ ಪವಿತ್ರ ಸ್ಥಳಗಳನ್ನು ರಕ್ಷಿಸಲು ಅರ್ಜಿ ಸಲ್ಲಿಸಿದರು.

ಅರ್ಜಿಯ ಪ್ರಕಾರ, ಪಲಿತಾನಾದ ಶತ್ರುಂಜಯ್‌ನಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳಿಂದ ಭಗವಾನ್ ಆದಿನಾಥನ ಚರಣ್ ಪಾದುಕೆಯನ್ನು ಧ್ವಂಸಗೊಳಿಸಲಾಗಿದೆ. ಇದಲ್ಲದೇ ಜಾರ್ಖಂಡ್ ಸೇರಿದಂತೆ ಹಲವು ಶಿಖರವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿರ್ಧಾರದಿಂದ ಇಡೀ ಜೈನ ಸಮುದಾಯಕ್ಕೆ ನೋವಾಗಿದೆ. ಅದಕ್ಕಾಗಿಯೇ ಜೈನ ಸಮುದಾಯವು ಎರಡೂ ತೀರ್ಥಕ್ಷೇತ್ರಗಳ ರಕ್ಷಣೆಗಾಗಿ ಬೀದಿಗಿಳಿದಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಜೈನ ಸಮುದಾಯ ಒತ್ತಾಯಿಸಿದೆ.

ABOUT THE AUTHOR

...view details