ಬಸ್ತಿ (ಉತ್ತರ ಪ್ರದೇಶ) : ನ್ಯಾಯದಾನ ವಿಳಂಬದ ಪ್ರಕರಣವೊಂದರಲ್ಲಿ ನ್ಯಾಯದಾನ ಎಷ್ಟು ವಿಳಂಬವಾಗಿದೆ ಎಂದರೆ ನ್ಯಾಯ ಸಿಕ್ಕೇ ಇಲ್ಲ ಎಂದು ಹೇಳಬಹುದು. ಮಾಡದ ತಪ್ಪಿಗೆ ವ್ಯಕ್ತಿಯೊಬ್ಬ 20 ವರ್ಷ ಜೈಲುವಾಸ ಅನುಭವಿಸಿದ ಕತೆ ಇದು. ಅಬ್ದುಲ್ಲಾ ಅಯೂಬ್ ಎಂಬಾತ ತಾನು ಮಾಡದ ತಪ್ಪಿಗೆ 20 ವರ್ಷ ಜೈಲಿನಲ್ಲಿದ್ದು, ಈಗ ಬಿಡುಗಡೆಯಾಗಿದ್ದಾನೆ. ಆತ ಮಾಡಿದ ಒಂದೇ ಒಂದು ತಪ್ಪು ಎಂದರೆ- ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಖುರ್ಷೀದ್ ಹೆಸರಿನ ಪೊಲೀಸ್ ಕಾನ್ಸ್ಟೆಬಲ್ ಒಬ್ಬನನ್ನು ಮನೆ ಖಾಲಿ ಮಾಡಿಸಿದ್ದು.
ಈ ಕತೆಯ ಆರಂಭ ಮಾರ್ಚ್ 2003 ರಲ್ಲಾಗುತ್ತದೆ. ಆಗ ಅಬ್ದುಲ್ಲಾ ಅಯೂಬ್ ತನ್ನ ಮನೆಯಲ್ಲಿ ಬಾಡಿಗೆಗಿದ್ದ ಪೊಲಿಸ್ ಕಾನ್ಸ್ಟೆಬಲ್ ಖುರ್ಷಿದ್ನನ್ನು ಮನೆ ಖಾಲಿ ಮಾಡಿಸಿದ್ದ. ಅದಾಗಿ ಕೆಲವೇ ದಿನಗಳಲ್ಲಿ 1 ಕೋಟಿ ರೂಪಾಯಿ ಬೆಲೆಬಾಳುವ 25 ಗ್ರಾಮ್ ಹೆರಾಯಿನ್ ಇಟ್ಟುಕೊಂಡ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು. ದಿನಗಳು, ತಿಂಗಳುಗಳು ಹಾಗೂ ವರ್ಷಗಳು ಕಳೆದರೂ ಅಯೂಬ್ ಒಂದೇ ಮಾತು ಹೇಳುತ್ತಿದ್ದ, ತಾನು ಯಾವುದೇ ತಪ್ಪು ಮಾಡಿಲ್ಲ ಅಂತ. ತನ್ನ ವಿರುದ್ಧ ಸಂಚು ಮಾಡಲಾಗಿದೆ ಎಂದು ಆತ ಹೇಳುತ್ತಲೇ ಇದ್ದ. ಆದರೂ ಆತ ಜೈಲಿನಲ್ಲೇ ಇರಬೇಕಾಯಿತು.
ಅಯೂಬ್‌ನ ವಕೀಲ ಪ್ರೇಮ್ ಪ್ರಕಾಶ್ ಶ್ರೀವಾಸ್ತವ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಹೆರಾಯಿನ್ ಎಂದು ವಸ್ತುವೊಂದನ್ನು ಹಾಜರುಪಡಿಸಿ ಸುಳ್ಳು ಪ್ರಕರಣದಲ್ಲಿ ಕಕ್ಷಿದಾರನನ್ನು ಬಂಧಿಸಲಾಗಿತ್ತು. ಖುರ್ಷಿದ್ನನ್ನು ಮನೆ ಖಾಲಿ ಮಾಡಿಸಿದ ನಂತರ ಇದೆಲ್ಲ ಆಗಿತ್ತು. ಖುರ್ಷಿದ್ ಈತ ಅನಿಲ್ ಸಿಂಗ್, ಎಸ್ಓ ಪುರಾನಿ ಬಸ್ತಿ ಲಾಲ್ಜಿ ಯಾದವ್ ಮತ್ತು ಎಸ್‌ಐ ನರ್ಮದೇಶ್ವರ್ ಶುಕ್ಲಾ ಅವರೊಂದಿಗೆ ತನ್ನ ಹಿಂದಿನ ಮನೆ ಮಾಲೀಕರನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿದ್ದ. ಈ ಪೊಲೀಸ್ ಅಧಿಕಾರಿಗಳು ಅಯೂಬ್‌ನ ಮೇಲೆ ನಕಲಿ ಹೆರಾಯಿನ್ ಪ್ರಕರಣದ ಸಂಚು ಮಾಡಿದ್ದು ಅಲ್ಲದೇ, ಅವನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲು ಫೋರೆನ್ಸಿಕ್ ಪುರಾವೆಗಳನ್ನು ಸಹ ತಿರುಚಿದ್ದರು.