ಅಮರಾವತಿ (ಆಂಧ್ರಪ್ರದೇಶ): ಇಡೀ ಸಚಿವ ಸಂಪುಟ ಪುನರ್ರಚನೆ ನಂತರ ಆಂಧ್ರಪ್ರದೇಶದ ಆಳಿಡತಾರೂಢ ವೈಎಸ್‌ಆರ್ ಕಾಂಗ್ರೆಸ್ನಲ್ಲಿ ಅಸಮಾಧಾನ ಎದ್ದಿದೆ. ಇದನ್ನು ಶಮನ ಮಾಡಲು ಪಕ್ಷದ ಅಧ್ಯಕ್ಷರಾದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪಕ್ಷದ ನಾಯಕರಿಗೆ ಹೊಸ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಕೆಲ ಮಾಜಿ ಸಚಿವರಿಗೆ ಪಕ್ಷದ ಪ್ರಾದೇಶಿಕ ಸಂಯೋಜಕರನ್ನಾಗಿ ಮತ್ತು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಸಚಿವ ಸ್ಥಾನದಿಂದ ವಂಚಿತರಾಗಿ ಬಂಡಾಯವೆದ್ದಿದ್ದ ಕೆಲ ಶಾಸಕರಿಗೂ ಹೊಸ ಹೊಣೆಯನ್ನು ಜಗನ್ ನೀಡಿದ್ದಾರೆ. ಶಾಸಕರಿಗೆ ಹೊಸ ಜಿಲ್ಲೆಗಳ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸರ್ಕಾರಿ ಸಲಹೆಗಾರರಾದ ಸಜ್ಜಲ ರಾಮಕೃಷ್ಣ ರೆಡ್ಡಿ ಮಂಗಳವಾರ ರಾತ್ರಿ ಹೊಸ ನೇಮಕಾತಿ ಆದೇಶಗಳನ್ನು ಪ್ರಕಟಿಸಿದ್ದಾರೆ.
14 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕರ್ನೂಲ್ ಮತ್ತು ನಂದ್ಯಾಲ್ ಜಿಲ್ಲೆಗಳಿಗೆ ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ್ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಸಚಿವ ಸಂಪುಟದಲ್ಲಿ ಎರಡನೇ ಅವಧಿಗೆ ಅವಕಾಶ ನೀಡದ ಕಾರಣ ಮೊದಲು ಭಿನ್ನ ಧ್ವನಿ ಎತ್ತಿದ್ದ ಮಾಜಿ ಇಂಧನ ಸಚಿವ ಬಾಲಿನೇನಿ ಶ್ರೀನಿವಾಸ ರೆಡ್ಡಿ ಅವರನ್ನು ನೆಲ್ಲೂರು, ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳೊಂದಿಗೆ ಪಕ್ಷದ ಪ್ರಾದೇಶಿಕ ಸಂಯೋಜಕರಾಗಿ ನೇಮಿಸಲಾಗಿದೆ.
ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆವೊಡ್ಡಿದ್ದ ಮಾಜಿ ಗೃಹ ಸಚಿವೆ ಎಂ.ಸುಚರಿತಾ ಅವರನ್ನು ಗುಂಟೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. 14 ವಿಧಾನಸಭಾ ಕ್ಷೇತ್ರಗಳ ಗುಂಟೂರು ಮತ್ತು ಪಲ್ನಾಡು ಜಿಲ್ಲೆಗಳಿಗೆ ಮಾಜಿ ಸಚಿವ ಕೆ.ಶ್ರೀವೆಂಕಟೇಶ್ವರರಾವ್ ಅವರನ್ನು ಪ್ರಾದೇಶಿಕ ಸಮನ್ವಯ ನಾಯಕರಾಗಿ ನೇಮಿಸಲಾಗಿದೆ. ಹೀಗೆ ಅಸಮಾಧಾನಿತರ ಶಾಸಕರು ಮತ್ತು ಮಾಜಿ ಸಚಿವರಿಗೆ ಹೊಸ ಹೊಣೆಯನ್ನು ಜಗನ್ ನೀಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ಗೆ 'ಪಿಕೆ' ಪೂರ್ಣಕಾಲದ ಮ್ಯಾನೇಜರ್ ಅಥವಾ ಸಲಹೆಗಾರ?: ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಸೋನಿಯಾ