ಮಜುಲಿ ದ್ವೀಪ(ಅಸ್ಸೋಂ):ಜಾಧವ್ ಪಯೆಂಗ್ ಒಬ್ಬ ಅಸ್ಸೋಂನ ಬುಡಕಟ್ಟು ಜನಾಂಗದ ಸಾಮಾನ್ಯ ವ್ಯಕ್ತಿ. ಪ್ರಕೃತಿ ಮತ್ತು ಹಸಿರಿನೊಂದಿಗೆ ವಿಶಿಷ್ಟ ಸಂಬಂಧ ಹೊಂದಿರುವ ಇವರು, ಮುಲೈ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಸುತ್ತಲಿನ ಜೀವರಾಶಿಗಳು, ಅರಣ್ಯ ಮತ್ತು ಪ್ರಕೃತಿಗೆ ಧಕ್ಕೆ ಬಂದಾಗ ಇವರ ಮನಸ್ಸು ಅವುಗಳ ಸಂರಕ್ಷಣೆಗೆ ಹಾತೊರೆಯುತ್ತದೆ. ಪರಿಸರ ರಕ್ಷಣೆಯಲ್ಲಿ ಪಯೆಂಗ್ ಅವರ ಸತತ ಪ್ರಯತ್ನವು, ಅವರನ್ನು ಜೀವಂತ ದಂತಕಥೆಯನ್ನಾಗಿಸಿದೆ.
1979ರಲ್ಲಿ ಅಸ್ಸೋಂನ ಗೋಲಘಾಟ್ ಜಿಲ್ಲಾಡಳಿತ, ಕೋಕಿಲಮುಖ್ ಬಳಿಯ ಓವಾನಾ ಚಾಪೋರಿಯಲ್ಲಿ ಅರಣ್ಯನಾಶಕ್ಕಾಗಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ಆಗ ಜಾದವ್ ಪಯೆಂಗ್ ಅವರು ಮರಗಳು ಮತ್ತು ಸಸಿಗಳನ್ನು ನೆಡಲು, ದೊಡ್ಡ ತಂಡದ ಜೊತೆಗೆ ಓವಾನಾ ಚಾಪೋರಿಗೆ ಹೋದರು. ಬಳಿಕ ಅವರ ಜೊತೆಗೆ ಬಂದ ಕಾರ್ಮಿಕರು ಹಿಂದಿರುಗಿದಾಗ, ಜಾಧವ್ ಅಲ್ಲಿ ಸಸ್ಯಗಳನ್ನು ನೋಡಿಕೊಳ್ಳಲು ಮತ್ತು ಪೋಷಿಸಲು ಅಲ್ಲಿಯೇ ಇದ್ದರು. ಆದ್ದರಿಂದ ಈಗ ಈ ಓವಾನಾ ಚಾಪೋರಿಯನ್ನು ಮುಲೈ ಕ್ಯಾಥೋನಿ ಎಂದು ಕರೆಯಲಾಗುತ್ತದೆ.
ಅರಣ್ಯ ಸಂರಕ್ಷಣೆಗಾಗಿ ಮುಲೈ ಅವರ ಈ ಕಾರ್ಯಗಳು 2009ರಲ್ಲಿ ಮುಂಚೂಣಿಗೆ ಬಂದವು. ಅದರ ನಂತರ ನೂರಾರು ಜನರು ಮುಲೈ ಕ್ಯಾಥೋನಿಗೆ ಈ ವಿಶಿಷ್ಟ ಮಾನವ ನಿರ್ಮಿತ ಅರಣ್ಯ ನೋಡಲು ಭೇಟಿ ನೀಡಿದರು. ಈಗ ಮುಲೈ ಕ್ಯಾಥೋನಿಯಲ್ಲಿ 100ಕ್ಕೂ ಹೆಚ್ಚು ಆನೆ, ಅಸಂಖ್ಯಾತ ಜಿಂಕೆಗಳು ಮತ್ತು ನಾಲ್ಕು ರಾಯಲ್ ಬಂಗಾಳ ಹುಲಿಗಳಿವೆ. ಪಯೆಂಗ್ ಅವರು ಅರಣ್ಯ ಸಂರಕ್ಷಣೆಗಾಗಿ ಮಾಡಿದ ಕಾರ್ಯದಿಂದಾಗಿ ವಿಶ್ವ ಸಮುದಾಯದಿಂದ ಮೆಚ್ಚುಗೆ ಪಡೆದ ಹೆಸರಾಗಿದೆ.