ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ತಾವು ಅಬುಧಾಬಿ ಸೇರಿದಂತೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಜಾಕ್ವೆಲಿನ್ ಇತ್ತೀಚೆಗೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ಬುಧವಾರ ಹಿಂಪಡೆದಿದ್ದಾರೆ. ನಟಿ ಜಾಕ್ವೆಲಿನ್ ಪಾಲ್ಗೊಳ್ಳಬೇಕಿದ್ದ ಐಐಎಫ್‌ಎ ಪ್ರಶಸ್ತಿ ಸಮಾರಂಭವು ಜೂನ್‌ನಲ್ಲಿ ನಡೆಯಲಿದೆ. ಹಾಗಾಗಿ ಈ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ನಟಿ ಪರ ವಕೀಲರು ಹೇಳಿದ್ದಾರೆ.
ಇದನ್ನೂ ಓದಿ:ನಟಿ ಜಾಕ್ವೆಲಿನ್ ಫರ್ನಾಂಡಿಸ್ 7 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ
ಅದಕ್ಕೂ ಮುನ್ನ 15 ದಿನಗಳ ಕಾಲ ಅಬುಧಾಬಿ, ಯುಎಇ, ನೇಪಾಳ ಮತ್ತು ಫ್ರಾನ್ಸ್‌ಗೆ ತುರ್ತು ಪ್ರಯಾಣಕ್ಕಾಗಿ ತನ್ನ ಪಾಸ್‌ಪೋರ್ಟ್ ಅನ್ನು ಬಿಡುಗಡೆ ಮಾಡಲು ಅನುಮತಿ ಕೋರಿ ಜಾಕ್ವೆಲಿನ್ ಸಲ್ಲಿಸಿದ ಅರ್ಜಿಯ ಕುರಿತು ದೆಹಲಿಯ ವಿಶೇಷ ನ್ಯಾಯಾಲಯವು ಇಡಿಯಿಂದ ಪ್ರತಿಕ್ರಿಯೆ ಕೇಳಿತ್ತು. ಆದರೆ, ಫ್ರಾನ್ಸ್ ಮತ್ತು ನೇಪಾಳದ ಪ್ರಯಾಣಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆ ಸಲ್ಲಿಸದ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಗಿದೆ ಎಂದು ಇಡಿ ಕೋರ್ಟ್ಗೆ ಹೇಳಿಕೆ ನೀಡಿತ್ತು.