ಜಬಲ್ಪುರ(ಮಧ್ಯಪ್ರದೇಶ):ಮಕ್ಕಳು, ಸೊಸೆಗೆ ವೃದ್ಧ ತಂದೆ- ತಾಯಿ ಭಾರವಾಗಿ ಅವರನ್ನು ಮನೆಯಿಂದ ಆಚೆ ಹಾಕಿದ ಎಷ್ಟೋ ಘಟನೆಗಳು ಸಮಾಜದಲ್ಲಿ ನಡೆದಿವೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ, ಕೋರ್ಟ್ನ ಮಧ್ಯಸ್ಥಿಕೆ ಮತ್ತು ಎಚ್ಚರಿಕೆಯಿಂದ ಮಗ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ತೊಳೆದು ಪೂಜಿಸಿ ಮನೆಗೆ ಕರೆದೊಯ್ದ ಘಟನೆ ನಡೆದಿದೆ.
ವಿವರ: ಮಧ್ಯಪ್ರದೇಶದ ಜಬಲ್ಪುರದ 80 ವರ್ಷದ ಹಿರಿಯರಾದ ಆನಂದ್ಗಿರಿ ಎಂಬುವವರನ್ನು ಅವರ ಮಗ ಮತ್ತು ಸೊಸೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನಿರಾಶ್ರಿತರಾದ ಆನಂದ್ಗಿರಿ ಅವರು ತನಗಾದ ಅನ್ಯಾಯದ ವಿರುದ್ಧ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕದ ತಟ್ಟಿದ್ದಾರೆ.
ತನ್ನನ್ನು ಮಗ ಮತ್ತು ಸೊಸೆ ಮನೆಯಿಂದ ಹೊರಹಾಕಿದ್ದಾರೆ. ತನಗೆ ನ್ಯಾಯ ಕೊಡಿಬೇಕು ಎಂದು ಆನಂದ್ಗಿರಿ ಅವರು ದೂರು ಸಲ್ಲಿಸಿದ್ದಾರೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆದ ಆಶಿಶ್ ಪಾಂಡೆ ಅವರು ತಕ್ಷಣವೇ ಆ ಹಿರಿಯ ಜೀವಿಯ ಮಗನನ್ನು ಸಂಪರ್ಕಿಸಿ ಆತನನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಘಟನೆಯ ವಿವರ ಪಡೆದು, ತಂದೆಯನ್ನು ಹೊರಹಾಕಿದ್ದಕ್ಕೆ ಛೀಮಾರಿ ಹಾಕಿದ್ದಾರೆ. ಅಲ್ಲದೇ, ಹೆತ್ತವರನ್ನು ಹೊರದಬ್ಬಿದ ಆರೋಪದ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.