ಜಬಲ್‌ಪುರ(ಮಧ್ಯಪ್ರದೇಶ):ಕಟ್ಟಿಕೊಂಡ ಹೆಂಡತಿ ಏನೇ ಹೇಳಿದರೂ ಗಂಡನೆಂಬ ಜೀವಿ ಮಾಡಿಕೊಡಲೇಬೇಕು. ಅದರಲ್ಲೂ ಪತ್ನಿ ಮುನಿಸಿಕೊಂಡರೆ ಅವಳನ್ನು ಸಮಾಧಾನಿಸುವುದು ಕಷ್ಟ ಕಷ್ಟ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಪತ್ನಿಯೊಬ್ಬಳು ಹಳೆಯ ಸ್ಕೂಟರ್ ಮೇಲೆ ಕೂರಲ್ಲ ಎಂದು ಹೇಳಿ ಕೋಪಗೊಂಡಿದ್ದಕ್ಕೆ ವ್ಯಕ್ತಿಯೊಬ್ಬ ಇಡೀ ಸ್ಕೂಟರನ್ನೇ ಮರುರೂಪಿಸಿದ್ದಲ್ಲದೇ, ಅದನ್ನು ಕಂಡ ಪ್ರತಿಯೊಬ್ಬರೂ ಕಣ್ ಕಣ್ ಬಿಡುವಂತೆ ಮಾಡಿದ್ದಾರೆ.
ಜಬಲ್‌ಪುರದ ಸತ್ಪುಲಾ ಬಜಾರ್ ನಿವಾಸಿಯಾದ, ಗ್ಯಾರೇಜ್ ನಡೆಸುತ್ತಿರುವ ಮಿಸ್ತ್ರಿ ಮೊಹಮ್ಮದ್ ಅಕ್ರಮ್ 'ಸೂಪರ್ ಸ್ಕೂಟರ್'ನ ಮಾಲೀಕ. ಹಳೆಯ ಸ್ಕೂಟರ್ ಬಳಸುತ್ತಿದ್ದ ಅಕ್ರಮ್ ತನ್ನ ಪತ್ನಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ, ಕೋಪಿಸಿಕೊಂಡ ಹೆಂಡತಿ ಇನ್ಮುಂದೆ ಈ ಹಳೆಯ ಸ್ಕೂಟರ್ ಮೇಲೆ ಕೂರಲ್ಲ ಎಂದು ರೇಗಾಡಿದ್ದಾಳೆ.
ಇದರಿಂದ ನೊಂದ ಅಕ್ರಮ್ ತನ್ನ ಪ್ರೀತಿಯ ಹಳೆ ಸ್ಕೂಟರ್ ಅನ್ನು ಬಿಸಾಡುವ ಬದಲು ಅದನ್ನೇ ಹೊಸದಾಗಿ ಮಾಡಲು ಯೋಚಿಸಿ, ತನ್ನ ಗ್ಯಾರೇಜ್ನಲ್ಲಿದ್ದ ಬಿಡಿ ಭಾಗಗಳನ್ನೇ ಬಳಸಿ ಹಳೆಯ ಸ್ಕೂಟರ್ಗೆ ಹೊಸ ಲುಕ್ ನೀಡಿದ್ದಾರೆ.
4 ತಿಂಗಳು, 80 ಸಾವಿರ ಖರ್ಚು:50 ವರ್ಷಗಳ ಹಳೆಯ ಸ್ಕೂಟರ್ ಅನ್ನು ಮರು ರೂಪಿಸಲು ಅಕ್ರಮ್ 4 ತಿಂಗಳು ಶ್ರಮಿಸಿ, 80 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಸ್ಕೂಟರ್ಗೆ ರೇಡಿಯಂ ಮೂಲಕ ಬೆಳಕು ಮೂಡುವ ದೀಪಗಳನ್ನು ಅಳವಡಿಸಿದ್ದಾರೆ. ಇದು ರಾತ್ರಿಯ ವೇಳೆ ವಿವಿಧ ಬಣ್ಣಗಳಲ್ಲಿ ಝಗಮಗ ಎಂದು ಹೊಳೆಯುತ್ತದೆ. ಅಲ್ಲದೇ, ಸ್ಕೂಟರ್‌ನಲ್ಲಿ ಹಾಡುಗಳನ್ನು ಕೇಳುವಂತೆ ಚಿಕ್ಕದಾದ ಮೊಬೈಲ್ ಅನ್ನು ಕೂಡಿಸಿದ್ದಾರೆ. ಇದನ್ನು ನಿರ್ವಹಿಸಲು ಬಟನ್ಗಳನ್ನು ಅಳವಡಿಸಿದ್ದಾರೆ.