ಶ್ರೀನಗರ(ಜಮ್ಮು-ಕಾಶ್ಮೀರ): ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಮೂವರು ಶಂಕಿತ ಸದಸ್ಯರನ್ನು ಜಮ್ಮುವಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿ ಜಮ್ಮುವಿನ ತ್ರಿಕೂಟ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ಸಂಚಾರ ನಿಯಂತ್ರಣದ ವೇಳೆ ರಸ್ತೆಯಲ್ಲಿದ್ದ ಟ್ಯಾಂಕರ್‌ಗೆ ಪೊಲೀಸರು ಮುಂದೆ ಹೋಗುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಟ್ಯಾಂಕರ್ ತೆಗೆದುಕೊಂಡು ಮುಂದೆ ಹೋಗಲು ಹಿಂದೇಟು ಹಾಕಿದ್ದ. ಸ್ವಲ್ಪ ಸಮಯದ ನಂತರ ಚಾಲಕ ಟ್ಯಾಂಕರ್ನೊಂದಿಗೆ ಚಲಿಸಿತ್ತು, ನರ್ವಾಲ್ ರಸ್ತೆಯಲ್ಲಿ ನಿಲ್ಲಿಸಿದ್ದಾನೆ.
ಟ್ರಾಫಿಕ್ ಕಡಿಮೆಯಾದರೂ ಸಹ ಟ್ಯಾಂಕರ್ ಚಾಲಕ ನರ್ವಾಲ್ ರಸ್ತೆಯಲ್ಲೇ ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದಾದ ಬಳಿಕ ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಚಾಲಕ ಮತ್ತು ಆತನ ಇಬ್ಬರು ಸಹಚರರು ಉತ್ತರ ನೀಡುವ ಬದಲು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದಾದ ನಂತರ ಟ್ಯಾಂಕರ್ ಚಾಲಕ ಮೊಹಮ್ಮದ್ ಯಾಸಿನ್, ಫರ್ಹಾನ್ ಫಾರೂಕ್ ಮತ್ತು ಫಾರೂಕ್ ಅಹ್ಮದ್ ಸೇರಿದಂತೆ ಮೂವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.