ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಐವರು ಉಗ್ರರ ಹತ್ಯೆ - terrorists Infiltration from Pakistan border

ಪಾಕ್​ ಗಡಿಯಿಂದ ಉಗ್ರರ ಒಳನುಸುಳುವಿಕೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗುಂಡಿನ ಚಕಮಕಿಯಲ್ಲಿ ಐವರು ಉಗ್ರರನ್ನು ಸದೆಬಡಿಯಲಾಗಿದೆ.

ಉಗ್ರರು ಸೇನೆಯ ಗುಂಡಿಗೆ ಬಲಿ
ಉಗ್ರರು ಸೇನೆಯ ಗುಂಡಿಗೆ ಬಲಿ

By ANI

Published : Oct 26, 2023, 3:55 PM IST

Updated : Oct 26, 2023, 8:27 PM IST

ಕುಪ್ವಾರ (ಜಮ್ಮು ಮತ್ತು ಕಾಶ್ಮೀರ):ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಂದ ಐವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕುಪ್ವಾರ ಜಿಲ್ಲೆಯ ಮಚ್ಚಲ್​ ಸೆಕ್ಟರ್​ನಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇನಾ ಗುಂಡಿಗೆ ಬಲಿಯಾಗಿದ್ದಾರೆ. ಬೆಳಗ್ಗೆ ಇಬ್ಬರನ್ನು ಹತ್ಯೆ ಮಾಡಿದ್ದ ಸೇನೆ ಬಳಿಕ ಕಾರ್ಯಾಚರಣೆ ಮುಂದುವರಿಸಿ ಮತ್ತೆ ಮೂವರನ್ನು ಬಲಿ ತೆಗೆದುಕೊಂಡಿತು. ಒಟ್ಟು ಐವರನ್ನು ಹತ್ಯೆ ಮಾಡಿರುವ ಭದ್ರತಾ ಪಡೆಗಳು ಆ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ.

ಉಗ್ರರನ್ನು ಹತ್ಯೆ ಮಾಡಿದ್ದರ ಬಗ್ಗೆ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್‌ನಲ್ಲಿ ಗುರುವಾರ ಭಯೋತ್ಪಾದಕರು ಗಡಿ ನುಸುಳಲು ಯತ್ನಿಸುತ್ತಿದ್ದಾಗ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಐವರನ್ನು ಹತ್ಯೆ ಮಾಡಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೋಸ್ಟ್​ ಮಾಡಿದ್ದಾರೆ.

ಉಗ್ರರ ಗಡಿ ನುಸುಳುವಿಕೆಯ ಬಗ್ಗೆ ಮುಂಜಾನೆ ಮಾಹಿತಿ ತಿಳಿದ ತಕ್ಷಣ ಜಾಗೃತಗೊಂಡ ಸೇನೆ, ಕುಪ್ವಾರ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿತು. ಈ ವೇಳೆ ಗುಂಡಿನ ಚಕಮಕಿಯೂ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

10 ನುಸುಳುಕೋರರ ಹತ್ಯೆ:ಈ ವರ್ಷ ಕುಪ್ವಾರ ಜಿಲ್ಲೆಯಲ್ಲಿ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ಸೇನೆ ವಿಫಲಗೊಳಿಸಿದೆ. ಗಡಿ ದಾಟಿ ಕಾಶ್ಮೀರ ಕಣಿವೆ ಪ್ರವೇಶಿಸಿದ ಹತ್ತಕ್ಕೂ ಹೆಚ್ಚು ಉಗ್ರರನ್ನು ಇದುವರೆಗೆ ಹತ್ಯೆ ಮಾಡಲಾಗಿದೆ. ಇದರೊಂದಿಗೆ ಗಡಿ ನಿಯಂತ್ರಣ ರೇಖೆ ಸೇರಿದಂತೆ ಜಮ್ಮು ಪ್ರಾಂತ್ಯದ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಾಟ ಮಾಡುವ ಡ್ರೋನ್‌ಗಳನ್ನೂ ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಒಳನುಸುಳುವಿಕೆ ತಡೆಯಲು ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಎಲ್‌ಒಸಿ ಸೇರಿದಂತೆ ಅಂತರರಾಷ್ಟ್ರೀಯ ಗಡಿ ಭಾಗದಲ್ಲೂ ನುಸುಳುಕೋರರು ಕಾಣಿಸಿಕೊಳ್ಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಶ್ಮೀರ ಕಣಿವೆಯೊಳಗೆ ಭಯೋತ್ಪಾದನೆ ಕೊನೆಯುಸಿರೆಳೆಯುತ್ತಿದೆ. ಆದರೆ, ಗಡಿಯಾಚೆಯಿಂದ ಪ್ರಚೋದನೆಗಳು ಇನ್ನೂ ಕಡಿಮೆಯಾಗಿಲ್ಲ. ಇಲ್ಲಿನ ಯುವಕರನ್ನು ಮಾದಕ ವ್ಯಸನಕ್ಕೆ ತಳ್ಳಲು ಪ್ರಯತ್ನ ನಡೆಯುತ್ತಿದೆ. ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಸಾಗಿಸಲು ಡ್ರೋನ್​ ಬಳಕೆ ಮಾಡಲಾಗುತ್ತಿದೆ. ನುಸುಳುಕೋರರು, ಡ್ರೋನ್‌ಗಳು ಗಡಿ ದಾಟಿ ಬರುವ ಯತ್ನಗಳೂ ಸಾಗಿವೆ. ಇವೆಲ್ಲವನ್ನೂ ಭದ್ರತಾ ಪಡೆಗಳು ವಿಫಲಗೊಳಿಸುತ್ತಿವೆ ಎಂದರು.

ಇದನ್ನೂ ಓದಿ:ಜಮ್ಮು ಕಾಶ್ಮೀರ: ಉರಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

Last Updated : Oct 26, 2023, 8:27 PM IST

ABOUT THE AUTHOR

...view details