ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ):ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮುಂದುವರೆದಿದೆ. ಇಲ್ಲಿನ ಗುಲ್ಮಾರ್ಗ್‌ನಲ್ಲಿಂದು ಸ್ಕೀಯಿಂಗ್ನಲ್ಲಿ ತೊಡಗಿದ್ದಾಗ ಇಬ್ಬರು ವಿದೇಶಿಗರು ಭಾರಿ ಹಿಮ ಕುಸಿತವಾಗಿ ಮೃತಪಟ್ಟಿದ್ದಾರೆ. ಇದೇ ವೇಳೆ ಇತರೆ 19 ವಿದೇಶಿ ಪ್ರಜೆಗಳು ಮತ್ತು ಇಬ್ಬರು ಸ್ಥಳೀಯ ಗೈಡ್ಗಳು ಸೇರಿ 21 ಜನರನ್ನು ರಕ್ಷಿಸಲಾಗಿದೆ.
ಬೆಳಗ್ಗೆ ರಷ್ಯಾ ಮತ್ತು ಪೋಲೆಂಡ್ ಮೂಲದ 21 ವಿದೇಶಿಗರು ಮತ್ತು ಇಬ್ಬರು ಸ್ಥಳೀಯ ಗೈಡ್‌ಗಳನ್ನು ಒಳಗೊಂಡ ಮೂರು ತಂಡಗಳು ಸ್ಕೀಯಿಂಗ್‌ಗಾಗಿ ಗುಲ್ಮಾರ್ಗ್‌ಗೆ ತೆರಳಿದ್ದವು. ಮಧ್ಯಾಹ್ನ 12.30ರ ಸುಮಾರಿಗೆ ಹಪತ್‌ಖುಡ್ ಕಾಂಗ್ಡೋರಿ ಎಂಬಲ್ಲಿ ದಿಢೀರ್ ಹಿಮಕುಸಿತ ಸಂಭವಿಸಿದೆ. ದಟ್ಟ ಹಿಮದಲ್ಲಿ ಸ್ಕೀಯಿಂಗ್ ತಂಡಗಳು ಸಿಲುಕಿಕೊಂಡಿದ್ದವು. ಈ ಕುರಿತು ಮಾಹಿತಿ ಪಡೆದ ತಕ್ಷಣವೇ ಬಾರಾಮುಲ್ಲಾ ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆಯ ಜಂಟಿ ರಕ್ಷಣಾ ತಂಡಗಳು ಹಿಮಪಾತದ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.
ಈ ಮೂಲಕ ಒಟ್ಟಾರೆ 23 ಜನರ ಪೈಕಿ 19 ಜನರನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಯಶಸ್ವಿಯಾದರು. ಆದರೆ, ಉಳಿದ ಇಬ್ಬರು ವಿದೇಶಿಗರು ಹಿಮದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡರು. ಮೃತರನ್ನು ಕ್ರಿಸ್ಲ್ಟೋಫ್ (43) ಮತ್ತು ಆಡಮ್ ಗ್ರ್ಜೆಕ್ (45) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಕೂಡ ಪೋಲೆಂಡ್ ದೇಶದವರಾಗಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಕೀಯಿಂಗ್ ತಂಡದಲ್ಲಿ ಪೋಲೆಂಡ್ನ ವಿದೇಶಿ ಗೈಡ್ ಬಾರ್ಟೋಸ್ ಮತ್ತು ಸ್ಥಳೀಯ ಗೈಡ್ಗಳಾದ ಫಯಾಜ್ ಅಹ್ಮದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಮಿರ್ ಸಹ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.