ಶ್ರೀನಗರ(ಜಮ್ಮು ಕಾಶ್ಮೀರ):ಸರ್ಕಾರದ ಹಣವನ್ನು ಬಳಸಿಕೊಂಡು ಸರ್ಕಾರದ ವಿರುದ್ಧವೇ ಕಾರ್ಯತಂತ್ರ ರೂಪಿಸುವ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ಸಂಬಂಧಿಕರ ವಿರುದ್ಧ ಜಮ್ಮು ಕಾಶ್ಮೀರ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ.
ಕಾಶ್ಮೀರ ಪ್ರತ್ಯೇಕತಾವಾದಿ ಹಾಗು ಪಾಕಿಸ್ತಾನ ಪರ ನಿಲುವು ಹೊಂದಿದ್ದು ಇತ್ತೀಚೆಗಷ್ಟೇ ಸಾವನ್ನಪ್ಪಿದ ಸಯ್ಯದ್ ಅಲಿ ಗೀಲಾನಿ ಮೊಮ್ಮಗ ಅನೀಸ್-ಉಲ್-ಇಸ್ಲಾಂ ಎಂಬಾತನನ್ನು ಸರ್ಕಾರದ ಕೆಲಸದಿಂದ ವಜಾಗೊಳಿಸಲಾಗಿದೆ. ಅನೀಸ್-ಉಲ್-ಇಸ್ಲಾಂ ಜಮ್ಮು ಕಾಶ್ಮೀರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ (SKICC) 2016ರಿಂದ ರಿಸರ್ಚ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ.
ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕ್ರಮವನ್ನು ತಕ್ಷಣವೇ ಜಾರಿಗೆ ಬರುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದೇಶಿಸಿದ್ದಾರೆ.
ಭಯೋತ್ಪಾದಕನ ಸಹೋದರನೂ ವಜಾ
ಸಯ್ಯದ್ ಅಲಿ ಗೀಲಾನಿ ಮೊಮ್ಮಗನನ್ನು ವಜಾಗೊಳಿಸಿದ ಆದೇಶದಲ್ಲಿಯೇ ಮತ್ತೊಬ್ಬ ನೌಕರನನ್ನು ಕೂಡಾ ಸರ್ಕಾರಿ ಸೇವೆಯಿಂದ ತೆಗೆದುಹಾಕಲಾಗಿದೆ. ದೋಡಾ ಜಿಲ್ಲೆಯ ಪಗ್ಶೂ ತಹಸಿಲ್ನಲ್ಲಿ ಶಿಕ್ಷಕನಾಗಿದ್ದ ಫಾರೂಖ್ ಅಹ್ಮದ್ ಭಟ್ ಸರ್ಕಾರಿ ಕೆಲಸದಿಂದ ವಜಾಗೊಂಡಿದ್ದಾನೆ.
ಜಮ್ಮು ಕಾಶ್ಮೀರ ಸರ್ಕಾರದ ಆದೇಶ ಭಾರತೀಯ ಸಂವಿಧಾನದ 311ನೇ ವಿಧಿಯ ಪ್ರಕಾರ, ರಾಜ್ಯದ ಹಿತದೃಷ್ಟಿಯ ಕಾರಣದಿಂದ ತಕ್ಷಣದಿಂದಲೇ ಜಾರಿ ಬರುವಂತೆ ಲೆಫ್ಟಿನೆಂಟ್ ಗವರ್ನರ್ ಈ ಕ್ರಮ ತೆಗೆದುಕೊಂಡಿದ್ದಾರೆ. ಫಾರೂಖ್ ಅಹ್ಮದ್ ಭಟ್ ಈಗಲೂ ಭಯೋತ್ಪಾದನಾ ಕೃತ್ಯಗಳಲ್ಲಿ ಸಕ್ರಿಯನಾಗಿರುವ ಮೊಹಮದ್ ಅಮಿನ್ ಭಟ್ನ ಸಹೋದರ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ದೇವರನಾಡಿನಲ್ಲಿ ವರುಣನ ರೌದ್ರ ನರ್ತನ: ಒಂದೇ ಕುಟುಂಬದ 6 ಮಂದಿ ಸಾವು, ಹಲವೆಡೆ ದುರಂತ