ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನ, ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಗೋವಾದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ, ನಿರುದ್ಯೋಗ, ಹೆಚ್ಚುತ್ತಿರುವ ಹಣದುಬ್ಬರ, ರೈತರ ಸಮಸ್ಯೆ, ರಾಷ್ಟ್ರೀಯ ಭದ್ರತೆ, ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ನಿರ್ಧರಿಸಲಾಯಿತು.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಒತ್ತಾಯ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ಮತ್ತು ಸಾಂಸ್ಥಿಕ ನಿರ್ಣಯವನ್ನು ಎಲ್ಲಾ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಎಲ್ಲಾ ರಾಜ್ಯ ಅಧ್ಯಕ್ಷರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಹೇಳಿಕೆ ತಿಳಿಸಿದೆ. ಹಾಗೆ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಬೇಕು. ಇದಕ್ಕಾಗಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ದೇಶದ ಹಿತದೃಷ್ಟಿಯಿಂದ ಎಲ್ಲಾ ಜ್ವಲಂತ ಸಮಸ್ಯೆಗಳ ಮೇಲೆ ಬೀದಿಗಿಳಿದು ಹೋರಾಡುತ್ತದೆ ಮತ್ತು ಈ ಹೋರಾಟವನ್ನು ಜನರ ಬಳಿಗೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಉಸ್ತುವಾರಿ ಮತ್ತು ಎಐಸಿಸಿ ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲವರು ಮಾತನಾಡಿ,ಮುಂದಿನ ದಿನಗಳಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡುತ್ತಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ರಾಹುಲ್ ಗಾಂಧಿಯ ಸಂದೇಶ ಪಾಲಿಸಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.