ನವದೆಹಲಿ: ಭಾರತದಲ್ಲಿ ಬೈಕ್ ರೇಸಿಂಗ್ ಆಯೋಜಿಸುವ ಮೋಟೋಜಿಪಿ ಆಯೋಜಕರು ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದ್ದಾರೆ. ಈ ಮೂಲಕ ಒಂಬತ್ತು ವರ್ಷಗಳ ನಂತರ 2023ರಲ್ಲಿ ಮೋಟೋಜಿಪಿ ಬೈಕ್ ರೇಸ್ ನಡೆಯುವುದು ಖಚಿತವಾಗಿದೆ.
ದೇಶದ 2011ರಿಂದ 2013ರವರೆಗೆ ಕಾರ್ ರೇಸಿಂಗ್ನ ಫಾರ್ಮುಲಾ1 ಆಯೋಜನೆ ಮಾಡಲಾಗಿತ್ತು. ಇದಾದ ನಂತರ ದೇಶದಲ್ಲಿ ಯಾವುದೇ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ 2023ರಲ್ಲಿ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಅರ್ಥಾತ್ ಗ್ರ್ಯಾಂಡ್ ಪ್ರಿಕ್ ಆಫ್ ಭಾರತ್ (Grand Prix of Bharat) ಆಯೋಜಿಸುವುದಾಗಿ ಮೋಟೋಜಿಪಿ ಖಚಿತ ಪಡಿಸಿದೆ. ಬೈಕ್ ರೇಸ್ನ ನಿರ್ದಿಷ್ಟ ದಿನಾಂಕ ಪ್ರಕಟಿಸಿಲ್ಲ. ಆದರೆ, ಬೈಕ್ ರೇಸ್ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಏಳು ವರ್ಷಗಳ ಎಂಒಯುಗೆ ಸಹಿ: ಮೋಟೋಜಿಪಿಯ ವಾಣಿಜ್ಯ ಹಕ್ಕು ಹೊಂದಿರುವ ಡೋರ್ನಾ ಉನ್ನತ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದಭದಲ್ಲಿ ಭಾರತೀಯ ರೇಸ್ ಪ್ರವರ್ತಕರಾದ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ (ಎಫ್‌ಎಸ್‌ಎಸ್) ಜೊತೆಗೆ ಏಳು ವರ್ಷಗಳ ಎಂಒಯುಗೆ ಸಹಿ ಹಾಕಿದ್ದರು. ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಸಭೆ ನಡೆಸಿದ್ದರು.
ಇದೇ ವೇಳೆ, ಎಫ್‌ಎಸ್‌ಎಸ್ ಮುಂದಿನ ವರ್ಷ ಮೋಟೋಜಿಪಿ ರೇಸ್ ನಡೆಯಲಿದೆ ಎಂದು ಘೋಷಿಸಿತ್ತು. ಆದರೆ, ಡೋರ್ನಾ ಎಂಡಿ ಕಾರ್ಲೋಸ್ ಎಜ್ಪೆಲೆಟಾ ಅವರು, ರೇಸ್ ನಡೆಸುವ ಬಗ್ಗೆ ನಿರ್ದಿಷ್ಟವಾದ ವರ್ಷವಾಗಲಿ, ಸಮಯವಾಗಿ ತಿಳಿಸಿರಲಿಲ್ಲ. ಈಗ 2023ರಲ್ಲಿ ಗ್ರ್ಯಾಂಡ್ ಪ್ರಿಕ್ ಆಫ್ ಭಾರತ್ ನಡೆಸುವುದಾಗಿ ಅವರೇ ಪ್ರಕಟಿಸಿದ್ದಾರೆ.