ಲೈಲಾಪುರ/ಬುರ್‌ಚೆಪ್ (ಮಿಜೋರಾಂ):ಅಸ್ಸೋಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದ ಕೇವಲ ಜೀವ ಹಾನಿಗೆ ಕಾರಣವಾಗಿಲ್ಲ, ಹಲವು ಜನರ ಜೀವನವನ್ನೂ ಹಾಳು ಮಾಡಿದೆ.
ಈ ಬಗ್ಗೆ ಮಾಹಿತಿ ಕಲೆ ಹಾಕಲು ಈಟಿವಿ ಭಾರತ ಪ್ರತಿನಿಧಿ ಎರಡು ರಾಜ್ಯಗಳ ಕೆಲವು ಗಡಿ ಗ್ರಾಮಗಳಿಗೆ ಭೇಟಿ ನೀಡಿದಾಗ, ಅಲ್ಲಿನ ನಿವಾಸಿಗಳು ಗಡಿ ವಿವಾದದಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕಂಡುಬಂತು. ಹಲವು ಮಿಜೋ ಗ್ರಾಮಸ್ಥರು ತಮ್ಮ ಜೀವನೋಪಾಯದಿಂದ ವಂಚಿತರಾಗಿರುವುದು ಗೋಚರಿಸಿತು. ಅವರೆಲ್ಲಾ ತಮ್ಮ ಹೊಲಗಳಿಗೆ ತೆರಳುವುದಕ್ಕೂ ಅಸ್ಸೋಂ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಸ್ಸೋಂ ಪೊಲೀಸರ ಭಯದಿಂದ ನಮ್ಮ ಗ್ರಾಮದ ಅನೇಕ ಮಂದಿ ಗಡಿಯ ಇನ್ನೊಂದು ಬದಿಯಲ್ಲಿರುವ ತಮ್ಮದೇ ಹೊಲಕ್ಕೆ ತೆರಳಲು ಹೆದರುತ್ತಿದ್ದಾರೆ. ಗಡಿ ಸಂಘರ್ಷದ ಬಳಿಕ ನಾವು ನಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದೇವೆ ಎಂದು ಮಿಜೋರಾಂನ ಸೈಹಾಪು-ವಿ ಗ್ರಾಮ ಪಂಚಾಯತ್ ಅಧ್ಯಕ್ಷ ವನ್ಲಾಲ್ಜಾವ್ನಾ ಹೇಳುತ್ತಾರೆ.
ಹೆಚ್ಚಿನ ಮಿಜೋ ಗ್ರಾಮಸ್ಥರು ಜುಮ್ (ತಾತ್ಕಾಲಿಕವಾಗಿ ಒಂದು ಕಡೆ ಸಾಗುವಳಿ ಮಾಡಿ ಬಳಿಕ ಸ್ಥಳಾಂತರಿಸುವುದು) ಕೃಷಿಕರಾಗಿದ್ದಾರೆ. ಅವರು ಬೆಟ್ಟ ಪ್ರದೇಶಗಳ ಕಳೆ ಸ್ವಚ್ಚಗೊಳಿಸಿ ಅಥವಾ ಸುಟ್ಟು, ಬಳಿಕ ಅಲ್ಲಿ ಸಾಗುವಳಿ ಮಾಡುತ್ತಾರೆ. ಗಡಿ ಘರ್ಷಣೆ ನಡೆದ ಬಳಿಕ ಗುಡ್ಡ ಪ್ರದೇಶದಲ್ಲಿ ಎರಡೂ ರಾಜ್ಯಗಳ ಗಡಿಯನ್ನು ಗುರುತಿಸಲಾಗಿದೆ. ಈ ವೇಳೆ ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಮಿಜೋ ಗ್ರಾಮಸ್ಥರ ಭೂಮಿ ಅಸ್ಸೋಂ ವ್ಯಾಪ್ತಿಗೆ ಬಂದಿದೆ.
ಇದರಿಂದ ಬಡ ಕೃಷಿಕರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂಮಿ ತಮ್ಮ ಹೆಸರಲ್ಲಿ ಇದ್ದರೂ, ಗಡಿ ದಾಟಿ ಜಮೀನಿಗೆ ಹೋಗಲಾಗದ ಪರಿಸ್ಥಿತಿ ಎದುರಾಗಿದೆ. ಮಿಜೋರಾಂನ ಕೊಲಾಸಿಬ್ ಮತ್ತು ಬುರ್‌ಚೆಪ್ ಗ್ರಾಮಗಳ ಜನರು ಈ ಸಮಸ್ಯೆಗೆ ಸಿಲುಕಿದ್ದಾರೆ.
ಈ ಘರ್ಷಣೆ ಸಂಭವಿಸಿದ ಬಳಿಕ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ನಿಯೋಜನೆಗೊಂಡಿದ್ದಾರೆ. ಜುಲೈ 26 ಕ್ಕಿಂತ ಮೊದಲೇ ಅಸ್ಸೋಂ ಪೊಲೀಸರು ನಮ್ಮನ್ನು ಜಮೀನುಗಳಿಂದ ಓಡಿಸಿದ್ದಾರೆ ಎಂದು ಮಿಜೋ ಗ್ರಾಮಸ್ಥರು ಆರೋಪಿಸುತ್ತಾರೆ. ಜುಲೈ 10 ರಂದೇ ಅಸ್ಸೋಂ ಪೊಲೀಸರು ನಮ್ಮನ್ನು ಜಮೀನುಗಳಿಂದ ಹೊರದಬ್ಬಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗಡಿ ವಿವಾದದಿಂದ ಸಾವಿರಾರು ಗ್ರಾಮಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ನಾವು ಪೊರಕೆ (ಪೊರಕೆ ತಯಾರಿಸುವ ಹುಲ್ಲು) ಕೃಷಿ ಮಾಡಿರುವುದನ್ನು ಅಸ್ಸೋಂನ ಟೀ ಬೆಳೆಗಾರರು ಹಾಳುಗೆಡವಿದ್ದಾರೆ ಮತ್ತು ನಮ್ಮ ಜಮೀನುಗಳಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ ಅನ್ನೋದು ಮಿಜೋ ಗ್ರಾಮಸ್ಥರ ನೋವು.
ಇದೀಗ ಗಡಿ ವಿವಾದ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಮತ್ತು ಈ ವಿವಾದ ಕೇವಲ ಸಾಮಾನ್ಯ ಜನರಲ್ಲದೆ, ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳೇ ಪರಸ್ಪರ ಜೀವಹಾನಿಗೆ ಮುಂದಾಗುವಷ್ಟು ಗಂಭೀರತೆಯಿಂದ ಕೂಡಿದ್ದು ಮಿಜೋರಾಂನ ಗ್ರಾಮಸ್ಥರು ಸದ್ಯಕ್ಕೆ ತಮ್ಮ ಜಮೀನು ವಾಪಸ್ ಪಡೆಯುವುದು ಕಷ್ಟ ಎಂದೇ ಹೇಳಬಹುದು. ಇದರಿಂದ ಅವರ ಜೀವನೋಪಾಯಕ್ಕೆ ದಿಕ್ಕೇ ಇಲ್ಲದಂತಾಗಿದೆ.
ಏನಿದು ಗಡಿ ವಿವಾದ?
ಮಿಜೋರಾಂನ ಐಜಾಲ್, ಕೊಲಾಸಿಬ್ ಮತ್ತು ಮಾಮಿತ್ ಹಾಗೂ ಅಸ್ಸೋಂನ ಕ್ಯಾಚರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳು 164.6 ಕಿ.ಮೀ ಉದ್ದದ ಅಂತರ್‌ರಾಜ್ಯ ಗಡಿ ಹಂಚಿಕೊಂಡಿವೆ. ಇಲ್ಲಿ ಎರಡು ರಾಜ್ಯಗಳ ನಡುವೆ ಭೂಮಿ ಅತಿಕ್ರಮಣದ ಸಂಘರ್ಷ ನಡೆಯುತ್ತಿದೆ.
ಅಸ್ಸೋಂ ಮತ್ತು ಮಿಜೋರಾಂ ಮಧ್ಯೆ ಗಡಿ ವಿವಾದ ಬ್ರಿಟಿಷರ ವಸಾಹತುಶಾಹಿ ಕಾಲದಿಂದಲೂ ಇದೆ. 1875ರಲ್ಲಿ ಹೊರಡಿಸಲಾದ ಅಧಿಸೂಚನೆಯಂತೆ ಮಿಜೋರಾಂಗೆ ಹೊಂದಿಕೊಂಡಿರುವ ಲುಶೈ ಬೆಟ್ಟಗಳನ್ನು ಅಸ್ಸೋಂನ ಕ್ಯಾಚರ್ ಬಯಲು ಪ್ರದೇಶಗಳಿಂದ ಪ್ರತ್ಯೇಕಿಸಲಾಗಿತ್ತು.
ಆದರೆ, 1993ರಲ್ಲಿ ಲುಶೈ ಬೆಟ್ಟಗಳು ಮತ್ತು ಮಣಿಪುರದ ನಡುವಿನ ಗಡಿ ಗುರುತಿಸುವ ಇನ್ನೊಂದು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಿಜೋರಾಂ, 1875ರ ಅಧಿಸೂಚನೆಯ ಆಧಾರದ ಮೇಲೆ ಗಡಿಯನ್ನು ಗುರುತಿಸಬೇಕು ಎಂದು ಪ್ರತಿಪಾದಿಸಿಕೊಂಡು ಬಂದಿದೆ. 1933ರಲ್ಲಿ ಹೊರಡಿಸಲಾದ ಅಧಿಸೂಚನೆ ಮಿಜೋ ಸಮಾಜವನ್ನು ಸಂಪರ್ಕಿಸುವುದಿಲ್ಲ ಎಂದು ಮಿಜೋ ಮುಖಂಡರು ಆರೋಪಿಸುತ್ತಾ ಬಂದಿದ್ದಾರೆ.
ಮತ್ತೊಂದೆಡೆ, ಅಸ್ಸೋಂ ಸರ್ಕಾರ 1933ರ ಅಧಿಸೂಚನೆಯನ್ನು ಅನುಸರಿಸುತ್ತಿದೆ. ಎರಡು ರಾಜ್ಯಗಳು ಎರಡು ಅಧಿಸೂಚನೆಗಳನ್ನು ಪಾಲಿಸುತ್ತಿರುವುದರಿಂದ 150 ವರ್ಷಗಳಾದರೂ ಗಡಿ ವಿವಾದ ಇಂದಿಗೂ ತಣ್ಣಗಾಗಿಲ್ಲ.
ಇತ್ತೀಚಿನ ಗಲಾಟೆಗೆ ಕಾರಣ ಏನು?
ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅದಾದ ಎರಡೇ ದಿನದಲ್ಲಿ ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಗಲಾಟೆ ಪ್ರಾರಂಭವಾಗಿತ್ತು. ಇದೇ ವಿಚಾರವಾಗಿ ಅಮಿತ್ ಶಾ ಮಧ್ಯಪ್ರವೇಶ ಮಾಡಿ ಗಡಿ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದರು.
ವಿವಾದಿತ ಸ್ಥಳದಿಂದ ಎರಡು ರಾಜ್ಯಗಳು ಪೊಲೀಸರು ಹಿಂದೆ ಸರಿಯುವಂತೆ ತಿಳಿಸಲಾಗಿತ್ತು. ಇದಾದ ಬಳಿಕ ಮೇಲಿಂದ ಮೇಲೆ ಕಲ್ಲು ತೂರಾಟ, ಹಿಂಸಾಚಾರ ನಡೆಯುತ್ತಿತ್ತು. ಹೀಗಾಗಿ ಯೋಧರ ನಿಯೋಜನೆ ಮಾಡಲಾಗಿತ್ತು. ಅತಿಕ್ರಮಣ ವಿಚಾರವಾಗಿ ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಉಂಟಾಗಿರುವ ಕಲ್ಲು ತೂರಾಟ, ಹಿಂಸಾಚಾರದ ವೇಳೆ ಆರು ಮಂದಿ ಅಸ್ಸೋಂ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಈಗ ಹೇಗಿದೆ ಗಡಿಯ ಪರಿಸ್ಥಿತಿ?
ಗಡಿ ವಿವಾದ ತಾರಕ್ಕೇರಿ ಜೀವಹಾನಿ ಸಂಭವಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಕೇಂದ್ರ ಗೃಹ ಸಚಿವಾಲಯ, ಎರಡೂ ರಾಜ್ಯಗಳ ನಡುವೆ ಸಂಧಾನ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಪ್ರಸ್ತುತ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಜನರ ಅಂತಾರಾಜ್ಯ ಪ್ರಯಾಣ ನಿರ್ಬಂಧಿಸಲಾಗಿದೆ. ಎರಡೂ ರಾಜ್ಯಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಗಮನಾರ್ಹ ಅಂಶವೆಂದರೆ, ಗಡಿ ಸಂಧಾನ ನಡೆದಿರುವುದು ಕೇವಲ ಎರಡು ರಾಜ್ಯಗಳ ಜನ ಪ್ರತಿನಿಧಿಗಳ ನಡುವೆಯೇ ಹೊರತು ಜನರ ನಡುವೆ ಅಲ್ಲ. ನಮ್ಮ ರಾಜ್ಯ, ನಮ್ಮ ನೆಲ ಎಂಬ ನಿಟ್ಟಿನಲ್ಲಿ ಹಿಂಸಾಚಾರಕ್ಕೆ ಇಳಿದಿರುವ ಸಾಮಾನ್ಯ ಜನರು, ಯಾವುದೇ ಸಂಧಾನವನ್ನು ಕೇಳಲು ಸಿದ್ದರಿಲ್ಲ. ಹಾಗಾಗಿ, ಇದಕ್ಕೆ ಕೇಂದ್ರ ಸರ್ಕಾರ ಶಾಶ್ವತ ಪರಿಹಾರವನ್ನು ಕಾಣಬೇಕಿದೆ. ಇಲ್ಲದಿದ್ದರೆ, ಒಂದೇ ಒಕ್ಕೂಟ ವ್ಯವಸ್ಥೆಯ ಎರಡು ರಾಜ್ಯಗಳು ಭಾರತ-ಪಾಕಿಸ್ತಾನದಂತೆ ಉಳಿಯಬಹುದು.