ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ. ಪ್ರಸ್ತುತ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ನೂತನ ಉಪರಾಷ್ಟ್ರಪತಿಯ ಆಯ್ಕೆಗೆ ಇಂದು ಚುನಾವಣೆ ನಡೆಯಲಿದ್ದು, ಸಂಸತ್ತಿನಲ್ಲಿ ಇರುವ ಸಂಖ್ಯಾಬಲವನ್ನು ನೋಡಿದರೆ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಉಪಾಧ್ಯಕ್ಷರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಂವಿಧಾನದ ನಿಬಂಧನೆಯ ಪ್ರಕಾರ ರಾಷ್ಟ್ರಪತಿಯ ಕರ್ತವ್ಯಗಳು ಮತ್ತು ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈಗ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯು ಭಾರತದ 16 ನೇ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದೆ. ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಅವರು ಕಣಕ್ಕೆ ಇಳಿದಿದ್ದು, ಬಹುತೇಕ ಪ್ರತಿಪಕ್ಷಗಳು ಇವರಿಗೆ ಬೆಂಬಲ ಸೂಚಿಸಿವೆ. ಟಿಆರ್‌ಎಸ್ ಕೂಡ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಟಿಆರ್‌ಎಸ್ ಸಂಸದೀಯ ಪಕ್ಷದ ನಾಯಕ ಡಾ. ಕೆ.ಕೇಶವ ರಾವ್ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಸಾಂವಿಧಾನಿಕ ನಿಬಂಧನೆಗಳು: ಸಂವಿಧಾನದ 66 ನೇ ವಿಧಿಯ ನಿಬಂಧನೆಗಳ ಪ್ರಕಾರ ಉಪಾಧ್ಯಕ್ಷರನ್ನು ಎಲೆಕ್ಟರೋಲ್ ಅನ್ವಯ ಸದಸ್ಯರು ಆಯ್ಕೆ ಮಾಡುತ್ತಾರೆ. ಇನ್ನು ಎರಡೂ ಸದನಗಳ ಸದಸ್ಯರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಲೋಕಸಭೆಯ 543 ಚುನಾಯಿತ ಸದಸ್ಯರು ಹಾಗೂ ರಾಜ್ಯಸಭೆಯ 237 ಚುನಾಯಿತ ಮತ್ತು 12 ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ. ರಾಜ್ಯಸಭೆಯಲ್ಲಿ ಎಂಟು ಸ್ಥಾನಗಳು ಖಾಲಿ ಇವೆ. ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಾದ ಬಳಿಕ ಮತಗಳ ಎಣಿಕೆ ನಡೆಯಲಿದೆ.
ಸಂಸತ್ತಿನ ಎಲ್ಲಾ 788 ಚುನಾಯಿತ/ನಾಮನಿರ್ದೇಶಿತ ಸದಸ್ಯರ ಮತದ ಮೌಲ್ಯವು ಒಂದು ಮತವಾಗಿದೆ. ಸಂವಿಧಾನದ 68 ನೇ ವಿಧಿಯ ಪ್ರಕಾರ ನಿರ್ಗಮಿಸುವ ಉಪಾಧ್ಯಕ್ಷರ ಅವಧಿ ಮುಗಿಯುವ ಮೊದಲೇ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆದೇಶಿಸುತ್ತದೆ.
ಪಕ್ಷಗಳ ಸಂಖ್ಯಾಬಲ ಆಧರಿಸಿ ಹೇಳುವುದಾದರೆ ಧನಕರ್ ಅವರು 518 ರಿಂದ 539 ಮತಗಳನ್ನು ಹಾಗೂ ಆಳ್ವ ಅವರು 189 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ತೃಣಮೂಲ ಕಾಂಗ್ರೆಸ್ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಇರುವ ಪಕ್ಷಗಳು ಅಷ್ಟೇ ಅಲ್ಲದೆ ಬಿಜೆಡಿ, ಬಿಎಸ್‌ಪಿ, ವೈಎಸ್‌ಆರ್ ಕಾಂಗ್ರೆಸ್, ಟಿಡಿಪಿ ಮೊದಲಾದ ಪಕ್ಷಗಳು ಧನಕರ್ ಅವರಿಗೆ ಬೆಂಬಲ ಸೂಚಿಸಿವೆ.
ಯುಪಿಎ ಮೈತ್ರಿಕೂಟದಲ್ಲಿ ಇಲ್ಲದೆ ಇರುವ ಎಎಪಿ ಕೂಡ ವಿರೋಧ ಪಕ್ಷದ ಅಭ್ಯರ್ಥಿ ಆಳ್ವ ಅವರಿಗೆ ಬೆಂಬಲ ಸೂಚಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದ ಜೆಎಂಎಂ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಳ್ವ ಅವರನ್ನು ಬೆಂಬಲಿಸುವುದಾಗಿ ಹೇಳಿದೆ.