ಲಖನೌ (ಉತ್ತರ ಪ್ರದೇಶ): ದೇಶದಲ್ಲಿ ವಿತರಿಸಲಾಗುವ ಕೋವಿಡ್-19 ಲಸಿಕೆಗಳನ್ನು 'ಬಿಜೆಪಿಯ ಲಸಿಕೆ' ಎಂದು ಹೇಳಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಲಸಿಕೆಯನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಜನವರಿ 14ರಂದು ಆಚರಿಸಲಿರುವ ಹಿಂದೂ ಹಬ್ಬ 'ಮಕರ ಸಂಕ್ರಾಂತಿ' ವೇಳೆಗೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್, ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಇದನ್ನು ನಾವು ಪಡೆಯಲು ಸಾಧ್ಯವಿಲ್ಲ. 2022ರ ಚುನಾವಣೆಯ ನಂತರ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ಹೇಳಿದ್ದಾರೆ.