ಜಮ್ಮು : ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಸಂಬಂಧ ಐಟಿಬಿಪಿ ಅಧಿಕಾರಿಯ ಪುತ್ರ ಸೇರಿ ನಾಲ್ವರು ಆರೋಪಿಗಳನ್ನು ಸಾಂಬಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಯ ಮಗ ರೋಹಿತ್ ಮತ್ತು ಈತನ ಸಹಚರರಾದ ಸುನೀಲ್ ಶರ್ಮಾ ಅಲಿಯಾಸ್ ಕಾಡು, ರಾಜ್‌ವೀರ್ ಗಿಲ್, ಅಂಕುಶ್ ಶರ್ಮಾ ಅಲಿಯಾಸ್ ಜಲ್ಲು ಎಂದು ಗುರುತಿಸಲಾಗಿದೆ ಬಂಧಿತರೆಲ್ಲರೂ ಇಲ್ಲಿನ ವಿಜಯಪುರ ನಿವಾಸಿಗಳೆಂದು ತಿಳಿದುಬಂದಿದೆ. ಬಂಧಿತರಿಂದ ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರದ ನಾಥ್ವಾಲ್‌ನಲ್ಲಿ ಈ ಗ್ಯಾಂಗ್ ಬೆದರಿಕೆ ಹಾಕಿದ್ದಲ್ಲದೆ ಶಸ್ತ್ರಾಸ್ತ್ರ ಝಳಪಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಯ ಮಗ ರೋಹಿತ್ ಕುಖ್ಯಾತ ರೌಡಿಯಾಗಿದ್ದು, ಗ್ಯಾಂಗ್‌ನ ಕಿಂಗ್‌ಪಿನ್ ಆಗಿದ್ದಾನೆ. ಈತನ ಮೇಲೆ ಕೊಲೆ ಯತ್ನ ಪ್ರಕರಣ, ಬೆದರಿಕೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಬಳಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ ಆರೋಪಿ ಜೈಲು ಕೂಡ ಸೇರಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.