ಭುವನೇಶ್ವರ : ಒಡಿಶಾದ ಬಾಲಂಗೀರ್ ಜಿಲ್ಲೆಯ ಸುದ್ಪಾಡಾದಲ್ಲಿರುವ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ ಡಿಸ್ಟಿಲರಿ ಘಟಕದಿಂದ ವಶಪಡಿಸಿಕೊಳ್ಳಲಾದ ಹಣದ ಎಣಿಕೆ ಐದನೇ ದಿನವೂ ಮುಂದುವರೆದಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಅಗಾಧ ಪ್ರಮಾಣದ ಹಣ ಎಣಿಕೆಯಿಂದ ಕೆಟ್ಟು ಹೋಗುತ್ತಿರುವ ಎಣಿಕೆ ಯಂತ್ರಗಳನ್ನು ತಕ್ಷಣ ಸರಿಪಡಿಸಲು ಕೆಲ ಮೆಕ್ಯಾನಿಕ್ಗಳನ್ನು ಬ್ಯಾಂಕಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಸಂಬಲ್ಪುರ ಮತ್ತು ತಿತಿಲಾಘರ್ ಶಾಖೆಗಳಲ್ಲಿ ನೋಟುಗಳ ಎಣಿಕೆ ಮುಗಿದಿದೆ ಎಂದು ಎಸ್ಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ತಿತಿಲಾಘರ್ನಿಂದ 11 ಕೋಟಿ ರೂ., ಸಂಬಲ್ಪುರದಲ್ಲಿ 37.50 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 176 ಚೀಲಗಳಲ್ಲಿ ಶಾಖೆಗೆ ತಂದ ಹಣವನ್ನು ಎಣಿಸಲು ಬಾಲಂಗೀರ್ನ ಎಸ್ಬಿಐ ಶಾಖೆಯಲ್ಲಿ ಸುಮಾರು 60 ಸಿಬ್ಬಂದಿ ಮತ್ತು ಹಲವಾರು ಯಂತ್ರಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಶನಿವಾರ ರಾತ್ರಿಯವರೆಗೆ 102 ಚೀಲಗಳಲ್ಲಿ ಸಂಗ್ರಹಿಸಿದ ಸುಮಾರು 140 ಕೋಟಿ ರೂ. ಹಣ ಎಣಿಸಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಇನ್ನೂ 40 ಚೀಲಗಳಲ್ಲಿ ಇರಿಸಲಾದ ಹಣದ ಎಣಿಕೆ ಭಾನುವಾರ ಮಧ್ಯಾಹ್ನದವರೆಗೆ ಪೂರ್ಣಗೊಂಡಿದೆ ಎಂದು ದೃಢೀಕರಿಸದ ಮೂಲಗಳು ತಿಳಿಸಿವೆ. ಇದು ವಶಪಡಿಸಿಕೊಳ್ಳಲಾದ ಮೊತ್ತವನ್ನು ಸುಮಾರು 180 ಕೋಟಿ ರೂ.ಗೆ ಹೆಚ್ಚಿಸಿದೆ. ಭಾನುವಾರ ಸಂಜೆ ವೇಳೆಗೆ ಹಣದ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ, ಹೈದರಾಬಾದ್ನಿಂದ ಆದಾಯ ತೆರಿಗೆ ಅಧಿಕಾರಿಗಳ ತಂಡವೊಂದು ತನಿಖೆಗೆ ಸಹಾಯ ಮಾಡಲು ಬಾಲಂಗೀರ್ ತಲುಪಿದೆ.